ಎಲ್‌ಜಿಬಿಟಿಕ್ಯೂ ಹೋರಾಟರನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್

Update: 2018-10-13 14:53 GMT

ಕೊಲ್ಕತ್ತಾ,ಅ.13: ಕೊಲ್ಕತ್ತಾದಲ್ಲಿ ಎಲ್‌ಜಿಬಿಟಿಕ್ಯೂ ಹೋರಾಟಗಾರನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಪಾರ್ಕ್ ರಸ್ತೆ ಮೆಟ್ರೋ ನಿಲ್ದಾಣದಿಂದ ನಂದನ್‌ನತ್ತ ನಡೆದುಕೊಂಡು ಹೋಗುತ್ತಿದ್ದ ಎಲ್‌ಜಿಬಿಟಿಕ್ಯೂ ಹೋರಾಟಗಾರ ಒಭಿಷೇಕ್ ಕರ್ ನನ್ನು ತಡೆದ ಮೂವರು ಪೊಲೀಸರು, ನೀನು ಇಲ್ಲಿಗೆ ಲೈಂಗಿಕ ಆಕಾಂಕ್ಷೆ ಈಡೇರಿಸಲು ಆಗಮಿಸಿದ್ದೀಯಾ ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೆ, ಅವರ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮಂಗಳವಾರ ನಡೆದ ಈ ಘಟನೆಯ ಕುರಿತು ಆಂಗ್ಲ ಸುದ್ದಿ ವಾಹಿನಿ ಜೊತೆ ಮಾತನಾಡಿದ ಕರ್, “ಸಾಮಾನ್ಯ ಬಟ್ಟೆ ಧರಿಸಿದ್ದ ಪೊಲೀಸರು ವಾಕಿ ಟಾಕಿಯಲ್ಲಿ ಮಾತನಾಡುತ್ತಾ ಬೈಕ್‌ನಲ್ಲಿ ಸಾಗುತ್ತಿದ್ದರು. ನನ್ನನ್ನು ಕಂಡ ಕೂಡಲೇ ಬೈಕ್‌ನಿಂದ ಇಳಿದ ಒಬ್ಬ ಪೊಲೀಸ್ ನನ್ನ ಬಳಿ ಬಂದು ನನ್ನ ಕೆನ್ನೆಗೆ ಹೊಡೆದಿದ್ದು ಮಾತ್ರವಲ್ಲದೆ ನೀನು ಇಲ್ಲಿಗೆ ಲೈಂಗಿಕ ಆಕಾಂಕ್ಷೆ ತೀರಿಸಲು ಬಂದಿರುವಿಯಾ ಎಂದು ಕೇಳಿದ್ದಾರೆ” ಎಂದು ಆರೋಪಿಸಿದ್ದಾರೆ. “ಸಂಜೆಯ ನಂತರ ಆ ರಸ್ತೆಯಲ್ಲಿ ಓಡಾಡಬಾರದು ಎಂಬ ಸೂಚನೆ ನೀಡುವ ಯಾವುದೇ ಫಲಕವನ್ನು ಹಾಕಲಾಗಿರಲಿಲ್ಲ. ಅವರು ನನ್ನನ್ನು ನಿಲ್ಲಿಸಿ ದಂಡ ಹಾಕಬಹುದಿತ್ತು. ಅದರ ಬದಲಾಗಿ ಅವರು ನನ್ನ ಮೇಲೆ ದೌರ್ಜನ್ಯ ಎಸಗಿದರು. ಅವರು ಪದೇಪದೆ ನನ್ನನ್ನು ಹಿಜ್ಡಾ (ತೃತೀಯ ಲಿಂಗಿ) ಎಂದು ಕರೆಯುತ್ತಿದ್ದರು ಎಂದು ಕರ್ ಆರೋಪಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಪೊಲೀಸರು, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅವರನ್ನು ತಡೆಯಲು ಮುಂದಾದಾಗ ಹಿಜ್ಡಾಗಳು ಮತ್ತು ಸಾಮಾನ್ಯ ವ್ಯಕ್ತಿಗಳಿಗೆ ವ್ಯತ್ಯಾಸವಿರುತ್ತದೆ ಎಂದು ತಮಾಷೆ ಮಾಡಿದ್ದರು” ಎಂದು ಕರ್ ಆರೋಪಿಸಿದ್ದಾರೆ. ತಮ್ಮ ವರ್ತನೆಯ ಬಗ್ಗೆ ಮರುದಿನ ತಪ್ಪಿತಸ್ಥ ಪೊಲೀಸರು ಒಭಿಷೇಕ್ ಬಳಿ ಕ್ಷಮೆಯನ್ನು ಕೇಳಿದ್ದರೂ ಅದಕ್ಕೊಪ್ಪದ ಕರ್, ಔಪಚಾರಿಕ ಕ್ಷಮಾಪಣೆಯನ್ನು ಬಯಸಿದ್ದಾರೆ. ನೀವು ಯಾರನ್ನೂ ಅವರ ಲಿಂಗದ ಆಧಾರದಲ್ಲಿ ಅವಮಾನ ಮಾಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News