ಭಾಷೆ ಸಂವಹನ ಮಾತ್ರವಲ್ಲ, ಸಂಸ್ಕೃತಿಯ ಪ್ರತಿಬಿಂಬ: ವಸುಧೇಂದ್ರ

Update: 2018-10-13 15:00 GMT

ಮಂಗಳೂರು, ಅ.13: ಭಾಷೆಯನ್ನು ಕರಗತ ಮಾಡಿಕೊಂಡ ಮನುಷ್ಯ ಇನ್ನುಳಿದ ಪ್ರಾಣಿಗಳಿಗಿಂತ ವಿಭಿನ್ನವಾಗಿ ವ್ಯವಹರಿಸಲು ಕಲಿತುಕೊಂಡ. ಭಾಷೆ ಸಂವಹನಕ್ಕಾಗಿ ಮಾತ್ರವಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬವಾಗಿದೆ ಎಂದು ಬರಹಗಾರ ವಸುಧೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿವಿಯ ಕನ್ನಡ ವಿಭಾಗದಿಂದ ವಿವಿ ಕಾಲೇಜಿನ ಡಾ.ಶಿವರಾಮ್ ಕಾರಂತ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಭಾಷೆ ಮತ್ತು ಬದುಕು’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಹಿಮಾಲಯ ಪರ್ವತಗಳಂತಹ ಎತ್ತರದ ಪರ್ವತಗಳಿಗೆ 4,000 ಮೀ. ಎತ್ತರಕ್ಕೆ ಹತ್ತಿದ ನಂತರ ಗಾಳಿಯಲ್ಲಿ ಆಮ್ಲಜನಕ ಕಡಿಮೆಯಾಗುತ್ತದೆ. ತುಂಬಾ ಉಸಿರುಗಟ್ಟುತ್ತದೆ. ಜೀರ್ಣ ಶಕ್ತಿ ಇರುವುದಿಲ್ಲ. ಸಾವು ಬದುಕಿನ ಪ್ರಶ್ನೆ ಎದುರಾಗುತ್ತದೆ. ಈ ಗಾಳಿಗೆ ಇಂಗ್ಲಿಷ್‌ನಲ್ಲಿ ‘ಥಿನ್‌ಏರ್’ ಎಂದು ಕರೆಯಲಾಗುತ್ತದೆ. ನೇಪಾಳಿ ಮತ್ತು ಟಿಬೇಟಿಯನ್ ಭಾಷೆಯಲ್ಲಿ ಇದಕ್ಕೆ ಪದಗಳಿವೆ. ಆದರೆ ಕನ್ನಡದಲ್ಲಿ ಪದಗಳಿಲ್ಲ ಎಂದು ಭಾಷೆ ಮತ್ತು ಸಂವಹನದ ಕುರಿತು ವಿವರಿಸಿದರು.

ನಮ್ಮ ರಾಜ್ಯದಲ್ಲಿರುವ ಕುಮಾರ ಪರ್ವತದಂತಹ ಪರ್ವತಗಳು 2,000 ಅಡಿಗಿಂತ ಹೆಚ್ಚು ಎತ್ತರವಿಲ್ಲ. ಹಾಗಾಗಿ ಕನ್ನಡ ಜನಾಂಗ ಈ ಪದ ಸೃಷ್ಟಿ ಮಾಡುವ ಗೋಜಿಗೆ ಹೋಗಿಲ್ಲ. ಹಾಗಾಗಿ ಭಾಷೆ ಜನಜೀವನದ ಸಂಸ್ಕೃತಿಯ ಜೊತೆಗೆ ಥಳುಕು ಹಾಕಿಕೊಂಡಿದೆ. ಹಾಗಾಗಿ ಭಾಷೆ ಶಬ್ದ ಮತ್ತು ಅರ್ಥಕ್ಕೆ ಮೀರಿ ಅರ್ಥ ಮತ್ತು ಸಂಸ್ಕೃತಿಯ ಜೊತೆಗೆ ಬೆರೆತುಹೋಗಿದೆ ಎಂದು ವಸುಧೇಂದ್ರ ತಿಳಿಸಿದರು.

ಕಾರ್ಯಕ್ರಮದಲ್ಲಿ ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಇರ್ವತ್ತೂರು, ಡಾ.ರತ್ನಾವತಿ, ಡಾ.ರಾಜಲಕ್ಷ್ಮೀ, ಡಾ.ಲತಾ ಎ.ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News