ಬಿಸಿಸಿಐ ಮುಖ್ಯಸ್ಥನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿವರಣೆ ನೀಡಲು ಸಮಿತಿ ಆದೇಶ

Update: 2018-10-13 15:00 GMT

ಹೊಸದಿಲ್ಲಿ, ಅ.13: ತನ್ನ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಂದು ವಾರದ ಒಳಗೆ ವಿವರಣೆ ನೀಡುವಂತೆ ಬಿಸಿಸಿಐ ಮುಖ್ಯಸ್ಥ ರಾಹುಲ್ ಜೊಹ್ರಿಗೆ ಆಡಳಿತಗಾರರ ಸಮಿತಿ ಸೂಚಿಸಿದೆ.

ತನ್ನ ಮೇಲೆ ಜೊಹ್ರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅನಾಮಧೇಯ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ ಹಿನ್ನೆಲೆಯಲ್ಲಿ ಸಮಿತಿಯು ಈ ಆದೇಶವನ್ನು ನೀಡಿದೆ. ಬಿಸಿಸಿಐಯ ಸಿಇಒ ಆಗಿರುವ ರಾಹುಲ್ ಜೊಹ್ರಿ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿವೆ. ಹಾಗಾಗಿ ಈ ಕುರಿತು ವಿವರಣೆ ನೀಡುವಂತೆ ಜೊಹ್ರಿಗೆ ಸೂಚಿಸಲಾಗಿದೆ ಎಂದು ಆಡಳಿತಗಾರರ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜೊಹ್ರಿ ವಿರುದ್ಧದ ಆರೋಪವು ಅವರು ಬಿಸಿಸಿಐ ಜೊತೆಗಿನ ಗುತ್ತಿಗೆ ಅವಧಿಗಿಂತ ಮೊದಲ ಘಟನೆಯನ್ನಾಧರಿಸಿದ್ದಾಗಿದೆ. ಜೊಹ್ರಿ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಆದರೂ ಆಡಳಿತ ಸಮಿತಿಯು ಜೊಹ್ರಿಯಲ್ಲಿ ಈ ಬಗ್ಗೆ ವಿವರಣೆ ಕೇಳಿದೆ ಎಂದು ಸಮಿತಿ ತಿಳಿಸಿದೆ.

ಬಿಸಿಸಿಐ ಮುಖ್ಯಸ್ಥರಾಗಿ ನೇಮಕಗೊಳ್ಳುವ ಮೊದಲು ರಾಹುಲ್ ಜೊಹ್ರಿ ಡಿಸ್ಕವರಿ ನೆಟ್ವರ್ಕ್ ಏಶ್ಯಾ ಪೆಸಿಫಿಕ್‌ನಲ್ಲಿ ದಕ್ಷಿಣ ಏಶ್ಯಾದ ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಸದ್ಯ ದೇಶದಲ್ಲಿ ಹರಡುತ್ತಿರುವ ಮೀ ಟೂ ಅಭಿಯಾನದಡಿ ಅನಾಮಧೇಯ ಟ್ವಿಟರ್ ಬಳಕೆದಾರರೊಬ್ಬರು ಜೊಹ್ರಿ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News