ಮಹಿಳೆಯರ ಬಗ್ಗೆ ವಿವಾದಿತ ಹೇಳಿಕೆ: ಕೊಲ್ಲಂ ತುಳಸಿ ವಿರುದ್ಧ ಪ್ರಕರಣ ದಾಖಲು

Update: 2018-10-13 16:19 GMT

ತಿರುವನಂತಪುರ, ಅ.13: ಋತುಸ್ರಾವ ವಯಸ್ಸಿನ ಯಾವುದೇ ಮಹಿಳೆ, ಶಬರಿಮಲೆ ದೇವಾಲಯವನ್ನು ಪ್ರವೇಶಿಸುವ ಧೈರ್ಯವನ್ನು ಪ್ರದರ್ಶಿಸಿದಲ್ಲಿ ಆಕೆಯ ದೇಹವನ್ನು ಎರಡು ಭಾಗವಾಗಿ ಸೀಳು ಮಾಡುವುದಾಗಿ ಬೆದರಿಕೆ ಹಾಕಿದ್ದ ಮಲಯಾಳಂ ಚಿತ್ರನಟ ತುಲಸೀದಾಸ್ ನಾಯರ್ ಯಾನೆ ಕೊಲ್ಲಂ ತುಳಸಿ ವಿರುದ್ಧ ಕೇರಳ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ(ಡಿವೈಎಫ್‌ಐ)ದ ಕಾರ್ಯಕರ್ತರೊಬ್ಬರು ತುಲಸೀದಾಸ್ ವಿರುದ್ಧ ದೂರು ನೀಡಿದ್ದರು. ‘‘ಕೊಲ್ಲಂ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ರ್ಯಾಲಿಯೊದನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ತುಲಸೀದಾಸ್ ಅವರು ಶಬರಿಮಲೆ ದೇಗುಲ ಪ್ರವೇಶಿಸುವ ಮಹಿಳೆಯರನ್ನು ಎರಡು ಭಾಗವಾಗಿ ಸೀಳಲಾಗುವುದು.ಅದರಲ್ಲಿ ಒಂದು ಭಾಗವನ್ನು ದಿಲ್ಲಿಗೆ ಹಾಗೂ ಇನ್ನೊಂದು ಭಾಗವನ್ನು ತಿರುವನಂತಪುರದಲ್ಲಿರುವ ಮುಖ್ಯಮಂತ್ರಿಯ ಕಚೇರಿಗೆ ಎಸೆಯಬೇಕಾಗಿದೆ ಎಂದವರು ಹೇಳಿದ್ದರು. ಶಬರಿಮಲೆ ದೇವಾಲಯದ ಸಂಪ್ರದಾಯಗಳನ್ನು ಗೌರವಿಸಬೇಕೆಂದು ಅವರು ಆಗ್ರಹಿಸಿದ್ದರು. ಕೇರಳ ಮುಖ್ಯಮಂತ್ರಿ ಕಿವಿತಮ್ಮಟೆ ಹರಿದುಹೋಗುವಂತೆ ಜನತೆ ಅಯ್ಯಪ್ಪ ಕೀರ್ತನೆಗಳನ್ನು ಭಜಿಸಬೇಕೆಂದು ತುಲಸೀದಾಸ್ ಕರೆ ನೀಡಿದ್ದರು.

ಸುಪ್ರೀಂಕೋರ್ಟ್‌ನಲ್ಲಿರುವ ‘ಮೂರ್ಖ’ರಿಗೂ ಈ ಕೀರ್ತನೆಗಳು ಕೇಳಬೇಕಾಗಿದೆ ಎಂದವರು ಹೇಳಿದ್ದರು. ಆದಾಗ್ಯೂ ಆನಂತರ ತುಲಸೀದಾಸ್ ತನ್ನ ವಿವಾದಿತ ಹೇಳಿಕೆಯ ಬಗ್ಗೆ ಸುದ್ದಿ ಕಾರ್ಯಕ್ರಮವೊಂದರಲ್ಲಿ ಕ್ಷಮೆಯಾಚಿಸಿದ್ದಾರೆ.ಸುಪ್ರೀಂಕೋರ್ಟ್ ನ್ಯಾಯಾಧೀಶರ ಬಗ್ಗೆ ತಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆಯೆಂದವರು ಹೇಳಿದ್ದರು. ಕೇರಳ ಮಹಿಳಾ ಆಯೋಗವು ಕೂಡಾ ತುಲಸೀದಾಸ್ ಅವರ ವಿವಾದಿತ ಹೇಳಿಕೆಗೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News