ಸೌದಿ ಪತ್ರಕರ್ತ ತನ್ನ ಕೊನೆಯ ಕ್ಷಣಗಳನ್ನು ಆ್ಯಪಲ್ ವಾಚ್‌ನಲ್ಲಿ ಚಿತ್ರೀಕರಿಸಿದ್ದರು: ಟರ್ಕಿ ಪತ್ರಿಕೆ

Update: 2018-10-13 17:04 GMT

ಅಂಕಾರ (ಟರ್ಕಿ), ಅ. 13: ಅಮೆರಿಕದಲ್ಲಿ ವಾಸಿಸುತ್ತಿದ್ದ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ, ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯ ಕಾನ್ಸುಲೇಟ್ ಕಚೇರಿಯಲ್ಲಿ ತನ್ನ ಸಾವನ್ನು ತಾನೇ ಚಿತ್ರೀಕರಿಸಿರುವ ಸಾಧ್ಯತೆಯಿದೆ ಎಂದು ಟರ್ಕಿಯ ದೈನಿಕವೊಂದು ಶನಿವಾರ ವರದಿ ಮಾಡಿದೆ.

 ಅಕ್ಟೋಬರ್ 2ರಂದು ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸುವ ಮೊದಲು ಅವರು ತಾನು ಧರಿಸಿದ್ದ ಆ್ಯಪಲ್ ವಾಚ್‌ನಲ್ಲಿ ‘ರೆಕಾರ್ಡಿಂಗ್’ಗೆ ಚಾಲನೆ ನೀಡಿದ್ದರು ಎಂದು ‘ಸಬಾ’ ಪತ್ರಿಕೆಯನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಅವರ ‘ವಿಚಾರಣೆ, ಹಿಂಸೆ ಮತ್ತು ಹತ್ಯೆಯ ಕ್ಷಣಗಳನ್ನು ಧ್ವನಿಮುದ್ರಿಸಲಾಗಿದೆ ಹಾಗೂ ಅವರ ಫೋನ್ ಮತ್ತು ‘ಐಕ್ಲೌಡ್’-ಎರಡಕ್ಕೂ ಕಳುಹಿಸಲಾಗಿದೆ ಎಂದು ಪತ್ರಿಕೆ ಹೇಳಿದೆ.

ಐಕ್ಲೌಡ್ ಎಂದರೆ ಫೋನ್‌ಗೆ ಹೊರತಾಗಿ ಬಳಕೆದಾರರು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಐಫೋನ್ ಸರ್ವರ್‌ಗಳು.

‘ಹತ್ಯೆ’ಯಲ್ಲಿ ಭಾಗಿಯಾದ ಜನರ ಸಂಭಾಷಣೆಗಳು ದಾಖಲಾಗಿವೆ ಎಂದು ಪತ್ರಿಕೆ ಹೇಳಿದೆ.

ಸೌದಿ ಕಾನ್ಸುಲೇಟ್ ಕಚೇರಿ ಪ್ರವೇಶಿಸುವ ಮುನ್ನ ಜಮಾಲ್ ತನ್ನ ಫೋನನ್ನು ತನ್ನ ಭಾವೀ ಪತ್ನಿ ಹಾತಿಸ್ ಸೆಂಗಿಝ್‌ರ ಬಳಿ ಬಿಟ್ಟು ಹೋಗಿದ್ದರು.

ಜಮಾಲ್ ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಜಮಾಲ್‌ರ ಫೋನ್‌ನಲ್ಲಿ ಧ್ವನಿ ಫೈಲ್‌ಗಳನ್ನು ಪತ್ತೆಹಚ್ಚಿದ್ದಾರೆ.

ಫೈಲ್ ಡಿಲೀಟ್ ಮಾಡಲು ಯತ್ನಿಸಿದ್ದ ಹಂತಕರು

ಆ್ಯಪಲ್ ವಾಚನ್ನು ಗಮನಿಸಿದ ಹಂತಕರು, ಹಲವು ಪಾಸ್‌ವರ್ಡ್‌ಗಳನ್ನು ಬಳಸಿ ಅದನ್ನು ತೆರೆಯಲು ಪ್ರಯತ್ನಿಸಿದ್ದರು. ಅಂತಿಮವಾಗಿ ಪತ್ರಕರ್ತನ ಬೆರಳಚ್ಚು ಬಳಸಿ ಅದನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದರು.

ಕೆಲವು ಫೈಲ್‌ಗಳನ್ನು ಮಾತ್ರ ಡಿಲೀಟ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ‘ಸಬಾ’ ಹೇಳಿದೆ.

‘ಸಬಾ’ ಪತ್ರಿಕೆಯ ವರದಿ ಬಗ್ಗೆ ಸೌದಿ ಅರೇಬಿಯ ಮತ್ತು ಟರ್ಕಿ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.

ಪತ್ರಕರ್ತ ಹೊರಹೋಗಿರುವುದಕ್ಕೆ ಪುರಾವೆ ಕೊಡಿ: ಸೌದಿ ಅಧಿಕಾರಿಗಳಿಗೆ ಟರ್ಕಿ ಸೂಚನೆ

ಪತ್ರಕರ್ತ ಜಮಾಲ್ ಖಶೋಗಿ ನಾಪತ್ತೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಸೌದಿ ಅರೇಬಿಯ ಹೇಳಿಕೊಂಡು ಬರುತ್ತಿದೆ. ಅಕ್ಟೋಬರ್ 2ರ ಮಧ್ಯಾಹ್ನ ಜಮಾಲ್ ಕಾನ್ಸುಲೇಟ್‌ನಿಂದ ಹೊರಗೆ ಹೋಗಿದ್ದಾರೆ ಎಂದು ಅದು ಹೇಳಿಕೊಳ್ಳುತ್ತಿದೆ.

ಕಾನ್ಸುಲೇಟ್‌ನ ಹೊರಗೆ ಕಾಯುತ್ತಿದ್ದ ಜಮಾಲ್‌ರ ಭಾವೀಪತ್ನಿ, ಅವರು ಹೊರಗೆ ಬರುವುದನ್ನು ನೋಡಿಲ್ಲ ಎಂದು ಹೇಳಿದ್ದಾರೆ.

ಜಮಾಲ್ ಕಾನ್ಸುಲೇಟ್‌ನಿಂದ ಹೊರಗೆ ಹೋಗಿರುವುದಕ್ಕೆ ಪುರಾವೆ ಕೊಡಿ ಎಂದು ಟರ್ಕಿಯು ಸೌದಿ ಅಧಿಕಾರಿಗಳಿಗೆ ಸೂಚಿಸಿದೆ.

ಪತ್ರಕರ್ತನನ್ನು ಕೊಂದಿರುವುದಕ್ಕೆ ಪುರಾವೆಯಿದೆ: ಟರ್ಕಿ

ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್‌ಖಶೋಗಿಯನ್ನು ಕೊಂದು ದೇಹವನ್ನು ಛಿದ್ರ ಛಿದ್ರ ಮಾಡಿರುವ ಬಗ್ಗೆ ನಮ್ಮಲ್ಲಿ ಧ್ವನಿ ಮತ್ತು ದೃಶ್ಯ ಪುರಾವೆಗಳಿವೆ ಎಂದು ಟರ್ಕಿ ಸರಕಾರ ಅಮೆರಿಕದ ಅಧಿಕಾರಿಗಳಿಗೆ ತಿಳಿಸಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಶುಕ್ರವಾರ ವರದಿ ಮಾಡಿದೆ.

‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಸೌದಿ ಪತ್ರಕರ್ತ ಅಂಕಣ ಲೇಖನಗಳನ್ನು ಬರೆಯುತ್ತಿದ್ದರು.

ಪತ್ರಕರ್ತ ಅಕ್ಟೋಬರ್ 2ರಂದು ಸೌದಿ ಕಾನ್ಸುಲೇಟ್ ಕಚೇರಿಯನ್ನು ಪ್ರವೇಶಿಸಿದಾಗ ಸೌದಿಯ ಭದ್ರತಾ ತಂಡವೊಂದು ಅವರನ್ನು ಸೆರೆಹಿಡಿಯುವುದನ್ನು ತೋರಿಸುವ ಮುದ್ರಿಕೆಗಳಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಟರ್ಕಿ ಮಹಿಳೆಯೊಂದಿಗೆ ಮದುವೆಯಾಗುವುದಕ್ಕಾಗಿ ದಾಖಲೆಗಳನ್ನು ಪಡೆಯಲು ಸೌದಿ ಪ್ರಜೆಯಾಗಿರುವ ಅವರು ಸೌದಿ ಕಾನ್ಸುಲೇಟ್‌ಗೆ ಹೋಗಿದ್ದರು.

ತನಿಖೆಗಾಗಿ ಟರ್ಕಿಗೆ ಆಗಮಿಸಿದ ಸೌದಿ ತಂಡ

ಪತ್ರಕರ್ತನ ನಾಪತ್ತೆ ಪ್ರಕರಣದ ತನಿಖೆಗೆ ಸೌದಿ ಅರೇಬಿಯದ ತಂಡವೊಂದು ಶುಕ್ರವಾರ ಟರ್ಕಿಗೆ ಆಗಮಿಸಿದೆ ಎಂದು ಟರ್ಕಿಯ ಸರಕಾರಿ ಸುದ್ದಿ ಸಂಸ್ಥೆ ‘ಅನಡೊಲು’ ವರದಿ ಮಾಡಿದೆ.

ಸೌದಿ ತಂಡವು ಟರ್ಕಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News