ಇನ್ನೂ ನಡೆಯದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ!

Update: 2018-10-14 07:11 GMT

ಬಂಟ್ವಾಳ, ಅ. 13: ಪುರಸಭೆ ಚುನಾವಣೆ ಮುಗಿದು ಸದಸ್ಯರ ಆಯ್ಕೆಯಾದರೂ ಇನ್ನು ಜನಪ್ರತಿನಿಧಿಗಳ ಆಡಳಿತದ ದರ್ಬಾರ್ ಶುರುವಾಗಿಲ್ಲ. ಈಗ ಏನಿದ್ದರೂ ಆಡಳಿತಾಧಿಕಾರಿಗಳದ್ದೇ ಕಾರುಬಾರು...

ಕಳೆದ ಆಗಸ್ಟ್ 31ಕ್ಕೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಒಂದೂವರೆ ತಿಂಗಳಾಗುತ್ತಾ ಬಂದರೂ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ನಡೆದಿಲ್ಲ. ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಕಾರಣ ಈ ಆಯ್ಕೆ ವಿಳಂಬವಾಗಿದೆ. ಇದರಿಂದ ಬಂಟ್ವಾಳ ಪುರಸಭೆಯ ವಾರ್ಡ್‌ವಾರು ಅಭಿವೃದ್ಧಿ ಕಾರ್ಯಕ್ಕೆ ಹಿನ್ನ್ನಡೆಯಾಗುವ ಆತಂಕ ಎದುರಾಗಿದೆ.

 ಸೆ. 3ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನದಂದೇ ಸರಕಾರ ಬಂಟ್ವಾಳ ಪುರಸಭೆ ಸಹಿತ ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು. ಇದರಿಂದ ಫಲಿತಾಂಶ ಪ್ರಕಟಗೊಂಡ 15 ದಿನದೊಳಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯುವ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ಸರಕಾರ ಕೆಲವೊಂದು ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ದಿಢೀರನೆ ಮತ್ತೊಮ್ಮೆ ಬದಲಾಯಿಸಿದ್ದು, ಕಾನೂನು ಸಮರಕ್ಕೆ ಕಾರಣವಾಗಿದೆ. ಬಂಟ್ವಾಳ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೇ ಅತಂತ್ರ ಫಲಿತಾಂಶ ಲಭಿಸಿದೆ. ಗೆದ್ದವರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

ಮೀಸಲಾತಿಪಟ್ಟಿ ಬದಲಾವಣೆ

ಚುನಾವಣೆಯಲ್ಲಿ ಬಂಟ್ವಾಳ ಪುರಸಭೆೆಯ 27 ಸ್ಥಾನಗಳ ಪೈಕಿ, ಬಿಜೆಪಿ 11, ಕಾಂಗ್ರೆಸ್ 12 ಮತ್ತು ಎಸ್‌ಡಿಪಿಐ 4 ಸ್ಥಾನಗಳನ್ನು ಗಳಿಸಿದ್ದು, ಶಾಸಕ ಮತ್ತು ಸಂಸದರ ಮತ ಬಲದಿಂದ ಬಿಜೆಪಿ 13 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಿದ್ಧತೆ ಮಾಡಿಕೊಂಡಿತ್ತು.

ಪುರಸಭೆಯ ಪ್ರಕಟಿತ ಮೀಸಲಾತಿಯನ್ವಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಹಿಂದುಳಿದ ವರ್ಗ ‘ಎ’ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದರು. ಇದರನ್ವಯ ಮೂರು ಪಕ್ಷಗಳೂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧೆಗಿಳಿಯುವ ಸಿದ್ಧತೆಯಲ್ಲೂ ಇದ್ದವು. ಆದರೆ, ಇದ್ದಕ್ಕಿದ್ದಂತೆ ಮೀಸಲಾತಿ ಪಟ್ಟಿ ಬದಲಾವಣೆಗೊಂಡು, ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟಜಾತಿ ಅಭ್ಯರ್ಥಿ ಸ್ಪರ್ಧೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು

ಈ ಮೊದಲು ಪ್ರಕಟಿಸಿದ ಸಾಮಾನ್ಯ ಮಹಿಳಾ ಮೀಸಲಾತಿ ಪಟ್ಟಿಯಂತಾಗಿದ್ದರೆ, ಅಧ್ಯಕ್ಷ ಸ್ಥಾನಕ್ಕೆ ಮೂರು ಪಕ್ಷಗಳಲ್ಲಿಯೂ ಅಭ್ಯರ್ಥಿಗಳಿದ್ದರು. ಕಾಂಗ್ರೆಸ್‌ನಿಂದ ಜೆಸಿಂತಾ ಡಿಸೋಜ, ಗಾಯತ್ರಿ. ಬಿಜೆಪಿಯಿಂದ ವಿದ್ಯಾವತಿ ಪ್ರಮೋದ್, ಶಶಿಕಲಾ ಪ್ರಭಾಕರ್, ದೇವಕಿ ಪೂಜಾರಿ, ಮೀನಾಕ್ಷಿ ಜೆ.ಗೌಡ, ರೇಖಾ ರಮಾನಾಥ ಪೈ, ಶೋಭಾ ಹರೀಶ್ಚಂದ್ರ, ಜಯಂತಿ ಕುಲಾಲ್, ಚೈತನ್ಯಾ ಗಣೇಶ್ ದಾಸ್. ಎಸ್‌ಡಿಪಿಐಯಿಂದ ಸಂಶಾದ್ ಮತ್ತು ಝೀನತ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಡಿಪಿಐಯಿಂದ ಪುರಸಭೆಗೆ 2ನೇ ಬಾರಿ ಆಯ್ಕೆಯಾಗಿರುವ ಮುನೀಶ್ ಅಲಿ, ಮುಹಮ್ಮದ್ ಇದ್ರೀಸ್. ಕಾಂಗ್ರೆಸ್‌ನಿಂದ ವಾಸು ಪೂಜಾರಿ, ಮುಹಮ್ಮದ್ ಶರೀಫ್ ಶಾಂತಿಯಂಗಡಿ, ಮಾಜಿ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಹಸೈನಾರ್ ಅಭ್ಯರ್ಥಿಗಳಾದರೆ, ಬಿಜೆಪಿಯಿಂದ ಹರಿಪ್ರಸಾದ್ ಅರ್ಹತೆ ಪಡೆದಿದ್ದರು. ಈ ಮೀಸಲಾತಿ ಪಟ್ಟಿಯ ಅನುಸಾರವಾಗಿ ಎಸ್‌ಡಿಪಿಐ ನಿರ್ಣಾಯಕ ಪಾತ್ರವಹಿಸಿತ್ತು. ಗೆದ್ದ 3 ಪಕ್ಷಗಳೂ ಈ ಮೊದಲು ಪ್ರಕಟವಾಗಿದ್ದ ಮೀಸಲಾತಿ ಪಟ್ಟಿಯಂತೆ ಕಾರ್ಯತಂತ್ರ ರೂಪಿಸುವಾಗಲೇ, ಮತ್ತೆ ಬದಲಾದ ಮೀಸಲಾತಿ ಪಟ್ಟಿಯಂತೆ ಅಧ್ಯಕ್ಷ ಹುದ್ದೆ ಪರಿಶಿಷ್ಠ ಜಾತಿಗೆ ಮೀಸಲಾಯಿತು. ಇದರಲ್ಲಿ ಕಾಂಗ್ರೆಸ್‌ನ ಜನಾರ್ದನ ಚಂಡ್ತಿಮಾರ್ ಅವರೊಬ್ಬರೇ ಅರ್ಹ ಅ್ಯರ್ಥಿಯಾಗಿದ್ದರು. ಇಲ್ಲಿ ಯಾವುದೇ ಪಕ್ಷಕ್ಕೂ ಸ್ಪರ್ಧೆಗೆ ಅವಕಾಶ ಸಿಗದಂತಾಯಿತು. ಈ ಬಗ್ಗೆ ಪುರಸಭೆ ಅಧ್ಯಕ್ಷ ಮೀಸಲಾತಿ ಬದಲಾವಣೆ ಪ್ರಶ್ನಿಸಿ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು, ವಿದ್ಯಾವತಿ ಮತ್ತು ಜಯರಾಮ ನಾಯ್ಕ ಹೈಕೋರ್ಟ್ ಮೆಟ್ಟಿಲೇರಿದ್ದು, ಕಾನೂನು ಹೋರಾಟಕ್ಕೆ ಕಾರಣವಾಗಿದ್ದು, ಬಂಟ್ವಾಳ ಪುರಸಭೆಯ ಗದ್ದುಗೆಯ ಭಾಗ್ಯ ಯಾರ ಪಾಲಿಗೆ ಒಲಿಯಲಿದೆ ಎಂಬುದು ಕಾದುನೋಡಬೇಕಾಗಿದೆ

Writer - ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News