ಪೊಲೀಸರಿಗೆ ಬಲವಂತವಾಗಿ ಊಟ ತಿನ್ನಿಸಿದರೇ ಸಚಿವ ಝಮೀರ್ ಅಹ್ಮದ್ ಖಾನ್?: ವಾಸ್ತವವೇನು?

Update: 2018-10-14 09:33 GMT

ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ರಾಜ್ಯ ಸಚಿವ ಝಮೀರ್ ಅಹ್ಮದ್ ಖಾನ್ ಎಂಜಲೆಲೆಯಲ್ಲಿ ಉಳಿದ ಆಹಾರವನ್ನು ಪೊಲೀಸರಿಗೆ ಬಲವಂತವಾಗಿ ತಿನ್ನಿಸಿದ್ದಾರೆ ಎನ್ನುವ ತಲೆಬರಹವಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೊಗಳನ್ನು ಪೋಸ್ಟ್ ಮಾಡಿದ ಕೆಲವರು ಸಚಿವರು ಇತರರು ಹೀಗೆ ಊಟ ಕೊಟ್ಟರೆ ತಿನ್ನುತ್ತಾರೆಯೇ ಎಂದೂ ಪ್ರಶ್ನಿಸಿದ್ದಾರೆ. ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಿಜವಾಗಿ ನಡೆದದ್ದೇನು?, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ ಉಳಿದ ಫೋಟೊ ಮತ್ತು ವಿಡಿಯೋಗಳು ಯಾವುದು ಎಂಬುದರ ಬಗ್ಗೆ indiatoday.in ವರದಿ ಮಾಡಿದೆ.

"ಕರ್ನಾಟಕದ ಕಾಂಗ್ರೆಸ್ ಮುಸ್ಲಿಂ ಸಚಿವ ಝಮೀರ್ ಅಹ್ಮದ್, ಹಿಂದೂ ಪೊಲೀಸ್ ಪೇದೆಯೊಬ್ಬನಿಗೆ ಸಮಾರಂಭವೊಂದರಲ್ಲಿ ಎಂಜಲೆಲೆಯಲ್ಲಿ ಉಳಿದ ಊಟವನ್ನು ಬಲವಂತದಿಂದ ತಿನ್ನಿಸಿದ್ದಾರೆ” ಎಂದು @ExSecular ಎಂಬ ಟ್ವಿಟರ್ ಖಾತೆಯೊಂದು ಫೋಟೊಗಳನ್ನು ಪೋಸ್ಟ್ ಮಾಡಿತ್ತು. ಈ ಟ್ವಿಟರ್ ಖಾತೆಯು ತನ್ನ ಟ್ವೀಟ್ ಗೆ ಪೂರಕವಾಗಿ ಕನ್ನಡ ವೆಬ್‍ಸೈಟ್ ಒಂದರಲ್ಲಿ ಬಂದ ಲೇಖನವನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟನ್ನು ನೂರಾರು ಮಂದಿ ಶೇರ್ ಮಾಡಿದ್ದಾರೆ.

ಈ ಚಿತ್ರಗಳು ನಕಲಿಯಲ್ಲ; ಆದರೆ ಅದಕ್ಕೆ ಪೂರಕವಾಗಿ ನೀಡಿದ ಬರಹ ಮಾತ್ರ ತಪ್ಪುದಾರಿಗೆ ಎಳೆಯುವಂಥದ್ದು ಎಂದು indiatoday.in ವರದಿ ತಿಳಿಸಿದೆ.

ಕುತೂಹಲದ ವಿಚಾರವೆಂದರೆ ಟ್ವಿಟ್ಟರ್ ಹ್ಯಾಂಡರ್ @ExSecular ಗೆ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳು ಫಾಲೋವರ್‍ಗಳಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಗಿರಿರಾಜ್ ಸಿಂಗ್, ಪಿಯೂಶ್ ಗೋಯಲ್, ರಾಮ್ ಕೃಪಾಲ್ ಯಾದವ್, ವಿಜಯ್ ಗೋಯಲ್ ಕೂಡಾ ಫಾಲೋವರ್‍ಗಳ ಪಟ್ಟಿಯಲ್ಲಿದ್ದಾರೆ. ಈ ಟ್ವಿಟರ್‍ ಖಾತೆ ಮಹಿಳೆಯೊಬ್ಬರ ಭಾವಚಿತ್ರವನ್ನು ಪ್ರೊಫೈಲ್ ಫೋಟೊವಾಗಿ ಹೊಂದಿದ್ದು, ಒಟ್ಟು 54 ಸಾವಿರ ಫಾಲೋವರ್‍ಗಳಿದ್ದಾರೆ. "ಮಂದಿರ್ ವಹೀ ಬನಾಯೇಂಗೆ" ಎಂಬ ಬರಹ ಈ ಖಾತೆಯ ಬಯೊ ವಿಭಾಗದಲ್ಲಿದೆ. ಸ್ಥಳವನ್ನು "ಪೇಲ್ ಬ್ಲೂ ಡಾಟ್" ಎಂದು ಹೆಸರಿಸಲಾಗಿದೆ.

ಶೇರ್ ಮಾಡಲಾದ ನಾಲ್ಕು ಚಿತ್ರಗಳಲ್ಲಿ ಝಮೀರ್ ಅಹ್ಮದ್ ಖಾನ್ ಅವರು ಸಮವಸ್ತ್ರದಲ್ಲಿರುವ ಪೊಲೀಸರಿಗೆ ಬಾಳೆ ಎಲೆಯಿಂದ ಊಟ ತಿನ್ನಿಸುತ್ತಿರುವುದು ಕಂಡುಬರುತ್ತದೆ. ಈ ಬಗ್ಗೆ indiatoday.in ಸಚಿವ ಖಾನ್ ಅವರನ್ನು ಸಂಪರ್ಕಿಸಿ, ಈ ಚಿತ್ರದ ಬಗ್ಗೆ ಸ್ಪಷ್ಟನೆ ಪಡೆದಿದೆ. ಅವುಗಳು ನಿಜವಾದ ಚಿತ್ರಗಳಾಗಿದ್ದು, ಅಕ್ಟೋಬರ್ 10ರಂದು ಮೈಸೂರಿನಲ್ಲಿ ಕ್ಲಿಕ್ಕಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ದಸರಾ ಅಂಗವಾಗಿ ಆಯೋಜಿಸಿದ್ದ ಆಹಾರ ಮೇಳದ ಉದ್ಘಾಟನೆ ವೇಳೆ ತೆಗೆದ ಚಿತ್ರ ಎಂದವರು ತಿಳಿಸಿದ್ದಾರೆ.

"ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ದಸರಾ ಹಬ್ಬದ ಅಂಗವಾಗಿ ಹಲವು ಆಹಾರ ಮಳಿಗೆಗಳನ್ನು ನಾನು ಉದ್ಘಾಟಿಸಿದ್ದೇನೆ. ಈ ಚಿತ್ರ ಅದೇ ಸಮಾರಂಭದ್ದು" ಎಂದು ಸ್ಪಷ್ಟನೆ ನೀಡಿದ ಝಮೀರ್, ಪೊಲೀಸ್ ಪೇದೆಗೆ ಕೈತುತ್ತು ನೀಡಲು ಏನು ಕಾರಣ ಎಂದು ಕೇಳಿದಾಗ, "ಸಾರ್ವಜನಿಕ ಜೀವನದಲ್ಲಿ ರಾಜಕೀಯಕ್ಕೆ ಬರುವ ಮುನ್ನವೇ ಅಂದರೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಇದನ್ನು ಮಾಡುತ್ತಾ ಬಂದಿದ್ದೇನೆ" ಎಂದು ಉತ್ತರಿಸಿದರು.

"ಇದು ಸೌಹಾರ್ದ ಉತ್ತೇಜಿಸುವುದನ್ನು ಬಿಂಬಿಸುತ್ತದೆ. ನಾನು ಕೂಡಾ ಇತರರ ಕೈ ತುತ್ತನ್ನು ಹಾಗೆಯೇ ತಿನ್ನುತ್ತೇನೆ. ಈ ಸಮಾರಂಭದಲ್ಲಿ ಕೂಡಾ, ನಾನು ಅಂಧ ಮಕ್ಕಳ ಜತೆ ಊಟ ಮಾಡಿದೆ. ಪೊಲೀಸ್ ಪೇದೆಯೂ ಸೇರಿದಂತೆ ಅಲ್ಲಿ ಹಾಜರಿದ್ದ ಎಲ್ಲರ ಜತೆಯೂ ನಾನು ಆಹಾರ ಹಂಚಿಕೊಂಡೆ" ಎಂದವರು ಹೇಳಿದ್ದಾರೆ. "ಆದರೆ ನನ್ನ ತಟ್ಟೆಯಿಂದ ತಿನ್ನುವಂತೆ ಪೊಲೀಸ್ ಪೇದೆಯನ್ನು ಬಲವಂತಪಡಿಸಿದೆ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ" ಎಂದು ವಿಷಾದಿಸಿದ್ದಾರೆ.

ಈ ಆಹಾರ ಹಂಚಿಕೊಳ್ಳುವ ಸಂಪ್ರದಾಯದ ಬಗ್ಗೆ ಪರಿಶೀಲಿಸಿದಾಗ, ಅವರ ಫೇಸ್‍ ಬುಕ್ ಪೇಜ್‍ ನಲ್ಲಿ ಇದೇ ಸಮಾರಂಭಕ್ಕೆ ಸಂಬಂಧಿಸಿದ ವಿಡಿಯೊಗಳು ಕಂಡುಬಂದಿವೆ. ಈ ಸಮಾರಂಭದಲ್ಲಿ ಸಚಿವರು ತಾವು ತಿನ್ನುವ ಜತೆಗೆ ಹಲವು ಮಂದಿಗೆ ಒಬ್ಬಟ್ಟು ನೀಡುತ್ತಿರುವುದು ಕಾಣಿಸುತ್ತಿದೆ. ಇಷ್ಟೇ ಅಲ್ಲದೆ ಬೇರೊಬ್ಬರು ನೀಡುವ ಆಹಾರವನ್ನೂ ಅವರು ತಿನ್ನುತ್ತಾರೆ. ಇವರ ಫೇಸ್‍ ಬುಕ್ ಪೇಜ್‍ನ ಟೈಮ್‍ಲೈನ್ ನಲ್ಲಿ, ಹೀಗೆ ಖಾನ್ ಅವರು ತಮ್ಮ ಆಹಾರವನ್ನು ಹಂಚಿಕೊಳ್ಳುತ್ತಿರುವ ಹಲವು ಹಳೆಯ ಚಿತ್ರಗಳೂ ಇವೆ.

Full View Full View Full View Full View

Writer - ನಿಖಿಲ್ ದಾವರ್, indiatoday.in

contributor

Editor - ನಿಖಿಲ್ ದಾವರ್, indiatoday.in

contributor

Similar News