ನಿಮ್ಮ ಬೆಡ್‌ರೂಮ್‌ನಲ್ಲಿರುವ ಕ್ಯಾನ್ಸರ್‌ಗೆ ಕಾರಣವಾಗುವ ಇವುಗಳನ್ನು ಮೊದಲು ತೊಲಗಿಸಿ

Update: 2018-10-14 10:48 GMT

ವಿಶ್ವಾದ್ಯಂತ ಸಾವುಗಳಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳಂತೆ ಈ ವರ್ಷವೊಂದರಲ್ಲೇ ಸುಮಾರು 9.6 ಮಿಲಿಯ ಜನರು ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದ್ದಾರೆ.

ಕ್ಯಾನ್ಸರ್‌ವುಂಟಾಗಲು ಹಲವಾರು ಕಾರಣಗಳಿದ್ದು,ಈ ಪೈಕಿ ಕೆಲವು ಜೀವನಶೈಲಿಗೆ ಸಂಬಂಧಿಸಿವೆ. ಧೂಮ್ರಪಾನ ಈ ಕಾಯಿಲೆಯನ್ನುಂಟು ಮಾಡುವ ಪ್ರಮುಖ ಕಾರಣವಾಗಿದ್ದು,ಸರಿಯಾದ ಆಹಾರ ಕ್ರಮವನ್ನು ಅನುಸರಿಸದಿರುವುದು, ಜಡತೆಯಿಂದ ಕೂಡಿದ ಜೀವನಶೈಲಿ,ವೈಯಕ್ತಿಕ ಅನೈರ್ಮಲ್ಯ,ಅತಿಯಾದ ಮದ್ಯಪಾನ,ಆನುವಂಶಿಕತೆ ಇತ್ಯಾದಿಗಳು ಇತರ ಕಾರಣಗಳಾಗಿವೆ.

ಇವೆಲ್ಲ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣಗಳಾಗಿವೆಯಾದರೂ,ನಿಮ್ಮ ಬೆಡ್‌ರೂಮ್‌ನಲ್ಲಿರುವ ಕೆಲವು ವಸ್ತುಗಳೂ ಕ್ಯಾನ್ಸರ್‌ನ್ನುಂಟು ಮಾಡಬಲ್ಲವು ಎಂದರೆ ನಿಮಗೆ ಅಚ್ಚರಿಯಾದೀತು. ಈ ಬಗ್ಗೆ ಮಾಹಿತಿಯಿಲ್ಲಿದೆ.......

►ಹತ್ತಿಯ ತಲೆದಿಂಬುಗಳು ಮತ್ತು ಬೆಡ್‌ಶೀಟ್‌ಗಳು

ಎಲ್ಲರೂ ಮಲಗುವಾಗ ತಲೆದಿಂಬುಗಳನ್ನು ಬಳಸುತ್ತಾರೆ,ಆದರೆ ಹತ್ತಿಯ ತಲೆದಿಂಬುಗಳು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಲ್ಲವು. ಹತ್ತಿಯ ಬೆಳೆಗೆ ಅತಿಯಾಗಿ ಕೀಟನಾಶಕಗಳನ್ನು ಬಳಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಹತ್ತಿಯನ್ನು ರಕ್ಷಿಸಲು ಕಳೆನಾಶಕವನ್ನೂ ಸಿಂಪಡಿಸಲಾಗುತ್ತದೆ. ಈ ಕಳೆನಾಶಕಗಳು ಗ್ಲೈಫೋಸೇಟ್ ಎಂಬ ರಾಸಾಯನಿಕವನ್ನು ಒಳಗೊಂಡಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ಬಹಿರಂಗಗೊಳಿಸಿವೆ. ಹೀಗಾಗಿ ಸಾವಯವ ಹತ್ತಿಯಿಂದ ತಯಾರಾದ ತಲೆದಿಂಬುಗಳು ಮತ್ತು ಬೆಡ್‌ಶೀಟ್‌ಗಳನ್ನು ಬಳಸುವುದು ಈ ಅಪಾಯದಿಂದ ದೂರವಿರಲು ಅತ್ಯುತ್ತಮ ಮಾರ್ಗವಾಗಿದೆ.

►ಬಣ್ಣ

ಹೆಚ್ಚಿನವರು ಬಣ್ಣದ ವಾಸನೆಯನ್ನು ಇಷ್ಟಪಡುತ್ತಾರೆ,ಆದರೆ ವಿಷಾದದ ಅಂಶವೆಂದರೆ ಅದು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ. ಬಣ್ಣಗಳು ಕ್ಯಾನ್ಸರ್‌ಕಾರಕಗಳಾದ ಬಾಷ್ಪಶೀಲ ಆರ್ಗಾನಿಕ್ ಸಂಯುಕ್ತ(ವಿಒಸಿ)ಗಳನ್ನು ಒಳಗೊಂಡಿರುತ್ತವೆ. ತಮ್ಮ ವೃತ್ತಿಗಳಲ್ಲಿ ಬಣ್ಣಗಳೊಡನೆ ಹೆಚ್ಚು ಒಡನಾಡುವ ಪೇಂಟರ್‌ಗಳು,ಕಲಾವಿದರು ಮತ್ತು ಇತರ ಕಾರ್ಮಿಕರು ಶ್ವಾಸಕೋಶ,ಮೂತ್ರಕೋಶ,ಬಾಯಿ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗಿರುತ್ತದೆ. ಇಂತಹವರು ನಾನ್‌ಲಿಂಪೊಸೈಟಿಕ್ ಲ್ಯೂಕೇಮಿಯಾಕ್ಕೂ ಗುರಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಅಪಾಯದಿಂದ ದೂರವಿರಲು ವಿಒಸಿಯೇತರ ಬಣ್ಣಗಳನ್ನು ಬೆಡ್‌ರೂಮ್‌ಗೆ ಬಳಸುವುದು ಒಳ್ಳೆಯದು.

►ಏರ್ ರಿಫ್ರೆಷನರ್ಸ್

ಗಾಳಿಯನ್ನು ತಾಜಾ ಆಗಿರಿಸುವ ಏರ್ ರಿಫ್ರೆಷನರ್‌ಗಳ ಸುವಾಸನೆಯನ್ನು ಹೆಚ್ಚಿನವರು ಇಷ್ಟಪಡುತ್ತಾರೆ ಮತ್ತು ಬೆಡ್‌ರೂಮ್,ಲಿವಿಂಗ್ ರೂಮ್, ಬಾತ್‌ರೂಮ್....ಅಷ್ಟೇ ಏಕೆ,ಕಾರುಗಳು ಮತ್ತು ತಾವು ಕೆಲಸ ಮಾಡುವ ಸ್ಥಳದಲ್ಲಿಯೂ ಅದನ್ನು ಆಗಾಗ್ಗೆ ಸಿಂಪಡಿಸುತ್ತಿರುತ್ತಾರೆ. ಆದರೆ ಇವುಗಳಲ್ಲಿಯ ರಾಸಾಯನಿಕಗಳು ಕ್ಯಾನ್ಸರ್‌ನ್ನು ್ನ ತರುವ ಸಂಭವವಿದೆ ಎನ್ನುವುದು ನಿಮಗೆ ಗೊತ್ತೇ? ಹೀಗಾಗಿ ಸದಾ ಮಲ್ಲಿಗೆ ಅಥವಾ ಗುಲಾಬಿ ಹೂವುಗಳಿಂದ ತಯಾರಾದ ಏರ್ ರಿಫ್ರೆಷನರ್‌ಗಳನ್ನೇ ಬಳಸಿ ಅತವಾ ಎಸೆನ್ಶಿಯಲ್ ಆಯಿಲ್‌ಗಳು ಮತ್ತು ನೀರನ್ನು ಬಳಸಿ ನೀವೇ ನೈಸರ್ಗಿಕ ಏರ್ ರಿಫ್ರೆಷನರ್‌ನ್ನು ತಯಾರಿಸಿಕೊಳ್ಳಬಹುದು.

► ಕೃತಕ ಚರ್ಮದ ಪೀಠೋಪಕರಣಗಳು

ಕೃತಕ ಚರ್ಮದ ತಯಾರಿಕೆಯಲ್ಲಿ ಪಾಲಿವಿನೈಲ್ ಕ್ಲೋರೈಡ್(ಪಿವಿಸಿ) ಎಂಬ ಅಪಾಯಕಾರಿ ಪ್ಲಾಸ್ಟಿಕ್ ಪಾಲಿಮರ್ ಅನ್ನು ಬಳಸಲಾಗುತ್ತದೆ. ಇದು ಅಪಾಯಕಾರಿಯಾದ ಇತರ ರಾಸಾಯನಿಕಗಳನ್ನೂ ಒಳಗೊಂಡಿರುತ್ತದೆ. ಹೀಗಾಗಿ ಕೃತಕ ಚರ್ಮದಿಂದ ತಯಾರಿಸಲಾದ ಪೀಠೋಪಕರಣಗಳನ್ನು ನಿವಾರಿಸಿ. ಮೆಲಮೈನ್,ಪಾರ್ಟಿಕಲ್ ಬೋರ್ಡ್ ಮತ್ತು ಮಧ್ಯಮ ಸಾಂದ್ರತೆಯ ಫೈಬರ್‌ಬೋರ್ಡ್(ಎಂಇಎಫ್) ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವುದರಿಂದ ಇವುಗಳನ್ನು ಬಳಸಿ ತಯಾರಿಸಲಾದ ಪೀಠೋಪಕರಣಗಳಿಂದಲೂ ದೂರವಿರಿ. ಆರೋಗ್ಯಯುತರಾಗಿರಲು ಗಟ್ಟಿ ಮರವನ್ನು ಬಳಸಿ ತಯಾರಿಸಲಾದ ಪೀಠೋಪಕರಣಗಳನ್ನೇ ಬಳಸಿ. ಜಲನಿರೋಧಕ ಮೆತ್ತೆಗಳು ಮತ್ತು ದಿಂಬುಗಳು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವದರಿಂದ ಅವುಗಳನ್ನು ಬಳಸಬಾರದು.

► ಗ್ಯಾಜೆಟ್‌ಗಳು ಮತ್ತು ಇಲೆಕ್ಟ್ರಾನಿಕ್ ಸಾಧನಗಳು

ಹೆಚ್ಚಿನವರು ಮಲಗುವಾಗ ಮೊಬೈಲ್ ಫೋನ್‌ನ್ನು ಸಮೀಪವೇ ಇಟ್ಟುಕೊಂಡಿರುತ್ತಾರೆ ಮತ್ತು ಹೆಚ್ಚಿನ ಬೆಡ್‌ರೂಮ್‌ಗಳಲ್ಲಿ ಕಂಪ್ಯೂಟರ್, ಟಿವಿಗಳಂತಹ ಇತರ ವಿದ್ಯುನ್ಮಾನ ಸಾಧನಗಳೂ ಇರುತ್ತವೆ. ಈ ಸಾಧನಗಳು ನಮ್ಮನ್ನು ವಿದ್ಯುತ್‌ಕಾಂತೀಯ ತರಂಗಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತವೆ. ಈ ತರಂಗಗಳು ಕ್ಯಾನ್ಸರ್ ಕಾರಕಗಳಾಗಿದ್ದು,ಸುದೀರ್ಘ ಕಾಲ ಅವುಗಳಿಗೆ ಒಡ್ಡಿಕೊಳ್ಳುವುದು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರಿಸುವಾಗ ಮೊಬೈಲ್ ಫೋನ್‌ನ್ನು ಏರ್‌ಪ್ಲೇನ್ ಮೋಡ್‌ನಲ್ಲಿರಿಸುವುದು ಅಥವಾ ಎಲ್ಲ ವಿದ್ಯುನ್ಮಾನ ಸಾಧನಗಳನ್ನು ಸ್ವಿಚ್ ಆಫ್ ಮಾಡಿ ಅವುಗಳನ್ನು ದೂರವಿರಿಸುವುದು ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ಸರಳ ಉಪಾಯವಾಗಿದೆ. ಇದು ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ದೂರವಿರಿಸುವ ಜೊತೆಗೆ ಒಳ್ಳೆಯ ನಿದ್ರೆಗೂ ಪೂರಕವಾಗುತ್ತದೆ.

► ಹಾಸಿಗೆ ಮತ್ತು ಪರದೆಗಳು

ನಾವು ಬೆಡ್‌ರೂಮ್‌ನಲ್ಲಿ ಹಾಯಾಗಿರಲು ಬಳಸುವ ಹಾಸಿಗೆ ಮತ್ತು ಪರದೆಗಳು ತಯಾರಿಕೆಯ ಹಂತದಲ್ಲಿ ಜ್ವಾಲೆ ನಿರೋಧಕಗಳಂತಹ ಹಲವು ರಾಸಾಯನಿಕಗಳಲ್ಲಿ ನೆನೆದಿರುತ್ತವೆ ಮತ್ತು ಇವು ನಮ್ಮನ್ನು ಕ್ಯಾನ್ಸರ್‌ನಂತಹ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸುಲಭಭೇದ್ಯರನ್ನಾಗಿಸುತ್ತವೆ. ಈ ರಾಸಾಯನಿಕಗಳು ಮಿದುಳಿನ ಬೆಳವಣಿಗೆಗೆ ತಡೆಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದ್ದು,ಜೊತೆಗೆ ಹಾರ್ಮೋನ್‌ಗಳಲ್ಲಿ ವ್ಯತ್ಯಯಗಳನ್ನೂ ಉಂಟು ಮಾಡಬಲ್ಲವು. ಸಾವಯವ ಹಾಸಿಗೆಗಳು ಮತ್ತು ಸಾವಯವ ಕಚ್ಚಾ ವಸ್ತುಗಳಿಂದ ತಯಾರಾದ ಪರದೆಗಳಿಗೆ ಬದಲಾಗುವುದು ಇಂತಹ ಅಪಾಯಕಾರಿ ಪರಿಣಾಮಗಳಿಂದ ದೂರವುಳಿಯಲು ಅತ್ಯುತ್ತಮ ಮಾರ್ಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News