ಶಿವಮೊಗ್ಗ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಭ್ಯರ್ಥಿ ಕಣಕ್ಕಿಳಿಸದ ಕಾಂಗ್ರೆಸ್!

Update: 2018-10-14 17:15 GMT

ಶಿವಮೊಗ್ಗ, ಅ. 14: ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ, ಆ ಪಕ್ಷದಿಂದ ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲುವು ಖಚಿತ ಎಂಬ ವಾತಾವರಣವಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೀಗ, ಆ ಪಕ್ಷಕ್ಕೆ ಚುನಾವಣಾ ಕಣಕ್ಕಿಳಿಸಲು 'ಸಮರ್ಥ ಅಭ್ಯರ್ಥಿ' ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ! 

ಎಲ್ಲದಕ್ಕಿಂತ ಮುಖ್ಯವಾಗಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷ, ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಕಣಕ್ಕಿಳಿಸುತ್ತಿಲ್ಲ. ಇದು ಜಿಲ್ಲೆಯ ರಾಜಕಾರಣ ಇತಿಹಾಸ ಪುಟಕ್ಕೆ ಹೊಸ ಸೇರ್ಪಡೆಯಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕಾದ ದೊಡ್ಡ ಹಿನ್ನಡೆ ಎಂದೇ ಬಿಂಬಿಸಲಾಗುತ್ತಿದೆ. 

ಹೌದು. ಶಿವಮೊಗ್ಗ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಕ್ಷೇತ್ರದ ಮತದಾರರಲ್ಲಿತ್ತು. ಅದರಲ್ಲಿಯೂ ಆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಶೇ. 100 ರಷ್ಟು ವಿಶ್ವಾಸವಿತ್ತು. ಆದರೆ ದಿಢೀರ್ ಆಗಿ ಆ ಪಕ್ಷದ ಹೈಕಮಾಂಡ್ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ನಿರ್ಧಾರ ಕೈಗೊಂಡಿರುವುದು, ಜಿಲ್ಲಾ ಕಾಂಗ್ರೆಸ್ ಪಾಳೇಯವನ್ನು ಅಕ್ಷರಶಃ ಶಾಕ್‍ಗೊಳಗಾದ ಅನುಭವ ಉಂಟು ಮಾಡಿದೆ. ನಾಯಕರ ಈ ನಿರ್ಧಾರದ ವಿರುದ್ದ ಒಳಗೊಳಗೆ ತೀವ್ರ ಬೇಸರ, ಅಸಮಾಧಾನ ವ್ಯಕ್ತವಾಗಲಾರಂಭಿಸಿದೆ. 

"ನಿಜಕ್ಕೂ ನಿರೀಕ್ಷಿಸಿರಲಿಲ್ಲ. ಪಕ್ಷದ ವರಿಷ್ಠರ ಈ ನಿರ್ಧಾರದಿಂದ ಭವಿಷ್ಯದಲ್ಲಿ ಪಕ್ಷದ ಸಂಘಟನೆಗೆ ದೊಡ್ಡ ಮರ್ಮಾಘಾತ ಉಂಟಾಗಲಿದೆ. ನಾಯಕರು, ಕಾರ್ಯಕರ್ತರು ಭ್ರಮನಿರಸನಗೊಳ್ಳಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಪಕ್ಷದ ಜೊತೆ ಗುರುತಿಸಿಕೊಂಡಿರುವ ಸಾಂಪ್ರದಾಯಿಕ ಮತಬ್ಯಾಂಕ್ ಛಿದ್ರವಾಗಲಿದೆ. ಸದ್ಯಕ್ಕೆ ಚೇತರಿಸಿಕೊಳ್ಳಲಾಗದ ಮಟ್ಟಕ್ಕೆ ಹೊಡೆತ ಬೀಳುವುದು ನಿಶ್ಚಿತವಾಗಿದೆ.  ನೂರಾರು ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷದಲ್ಲಿ, ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಸಲು ಓರ್ವ ಸಮರ್ಥ ಅಭ್ಯರ್ಥಿ ಸಿಗಲಿಲ್ಲವೆಂದರೇ ಏನರ್ಥ? ಸೋಲು-ಗೆಲುವು ನಂತರದ ಮಾತಾಗಿದೆ. ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವುದು ಅತೀ ಜರೂರಾಗಿತ್ತು" ಎಂದು ಹೆಸರೇಳಲಿಚ್ಚಿಸದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೋರ್ವರು ಅಭಿಪ್ರಾಯಪಡುತ್ತಾರೆ. 

ಇದೇ ಮೊದಲು: ಜಿಲ್ಲೆಯ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ ಪ್ರಭಾವ ಅಚ್ಚಳಿಯದೆ ಉಳಿದಿರುವುದು ಕಂಡುಬರುತ್ತದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಲೋಕಸಭೆಗೆ ಚುನಾವಣೆ ನಡೆದ 1951 ರಿಂದಿಡಿದು ಕಳೆದ 2014 ರ ಚುನಾವಣೆಯವರೆಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಬಂದಿದೆ. ಹಾಗೆಯೇ ಅತೀ ಹೆಚ್ಚು ಬಾರಿ ಆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಕೂಡ. 
1951 ರಿಂದ 2014 ರವರೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಒಟ್ಟಾರೆ 17 ಲೋಕಸಭೆ ಚುನಾವಣೆಗಳು ನಡೆದಿದ್ದು, ಇದರಲ್ಲಿ 11 ಬಾರಿ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದೆ. ಉಳಿದಂತೆ ನಾಲ್ಕು ಬಾರಿ ಬಿಜೆಪಿ, ಒಮ್ಮೆ ಸಮಾಜವಾದಿ ಸೋಶಿಯಲಿಸ್ಟ್ ಪಾರ್ಟಿ (ಎಸ್.ಎಸ್.ಪಿ.) ಹಾಗೂ ಸಮಾಜವಾದಿ ಪಕ್ಷ (ಎಸ್.ಪಿ.) ಜಯ ಸಾಧಿಸಿದೆ. 

ಉತ್ತಮವಾಗಿದೆ: ಪ್ರಸ್ತುತ ಜಿಲ್ಲೆಯ ರಾಜಕಾರಣದ ಬಲಾಬಲ ಗಮನಿಸಿದರೆ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ ಆ ಪಕ್ಷದ 7 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‍ನ ಓರ್ವ ಅಭ್ಯರ್ಥಿ ಚುನಾಯಿತರಾಗಿದ್ದರೆ, ಜೆಡಿಎಸ್ ಪಕ್ಷದ ಸಾಧನೆ ಶೂನ್ಯವಾಗಿದೆ. ಜೆಡಿಎಸ್‍ಗೆ ಹೋಲಿಸಿದರೆ ಕಾಂಗ್ರೆಸ್ ಸಂಘಟನೆ ಕ್ಷೇತ್ರದಲ್ಲಿ ಉತ್ತಮವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ತನ್ನದೆ ಆದ ಸಾಂಪ್ರದಾಯಿಕ ಮತಬ್ಯಾಂಕ್‍ನ್ನು ಆ ಪಕ್ಷ ಕ್ಷೇತ್ರದಲ್ಲಿ ಹೊಂದಿದ್ದು, ಇದೇ ಆ ಪಕ್ಷದ ದೊಡ್ಡ ಆಸ್ತಿಯಾಗಿದೆ ಎಂದರೇ ತಪ್ಪಾಗಲಾರದು. 
ಈ ಎಲ್ಲ ಕಾರಣಗಳಿಂದಲೇ, ಪ್ರಸ್ತುತ ಉಪ ಚುನಾವಣೆಯಲ್ಲಿಯೂ ಅಭ್ಯರ್ಥಿ ಕಣಕ್ಕಿಳಿಸಬೇಕಾಗಿತ್ತು ಎಂಬುವುದು ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಅಭಿಮತವಾಗಿತ್ತು. ಆದರೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ವರಿಷ್ಠರ ನಿರ್ಧಾರ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗೆ ಮಾರಕವಾಗಲಿದೆ ಎಂಬುವುದು ಹಲವು ಕಾಂಗ್ರೆಸ್ಸಿಗರ ವಾದವಾಗಿದೆ. ಒಟ್ಟಾರೆ ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ನಿರ್ಧಾರ ಸ್ಥಳೀಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವುದಂತೂ ಸತ್ಯವಾಗಿದೆ. 

ಜೆಡಿಎಸ್‍ಗೆ ಬೆಂಬಲಿಸದಂತೆ ಮನವಿ ಮಾಡಿದ್ದ ಜಿಲ್ಲಾ ಘಟಕ!
ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ, ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ವರಿಷ್ಠರು ನಿರಂತರ ಸಮಾಲೋಚನಾ ಸಭೆ ನಡೆಸಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಭಿಪ್ರಾಯ ಆಲಿಸಿದ್ದರು. 'ಪಕ್ಷದ ಅಭ್ಯರ್ಥಿಯಾಗಿ ಯಾರನ್ನೇ ಕಣಕ್ಕಿಳಿಸಿದರೂ ನಿಮ್ಮ ನಿರ್ಧಾರಕ್ಕೆ ತಲೆಬಾಗುತ್ತವೆ. ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುವ ನಿರ್ಧಾರ ಮಾತ್ರ ಕೈಗೊಳ್ಳಬಾರದು. ಕ್ಷೇತ್ರದಲ್ಲಿ ಜೆಡಿಎಸ್‍ಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಗಟ್ಟಿಯಾಗಿದೆ. ತನ್ನದೆ ಆದ ಸಂಘಟನೆ, ಮತ ಬ್ಯಾಂಕ್ ಹೊಂದಿದೆ. ಒಂದು ವೇಳೆ ಜೆಡಿಎಸ್‍ಗೆ ಬೆಂಬಲಿಸಿದರೆ ಪಕ್ಷದ ಸಂಘಟನೆ ಮೇಲೆ ಗಂಭೀರ ಪೆಟ್ಟು ಬೀಳಲಿದೆ. ಮತ ಬ್ಯಾಂಕ್ ಛಿದ್ರವಾಗಲಿದೆ' ಎಂದು ಜಿಲ್ಲಾ ಕಾಂಗ್ರೆಸ್ ಘಟಕ ತನ್ನ ಅಭಿಪ್ರಾಯ ದಾಖಲಿಸಿತ್ತು ಎಂದು ಮೂಲಗಳು ಹೇಳುತ್ತವೆ. ಈ ಕಾರಣದಿಂದಲೇ ಕಾಂಗ್ರೆಸ್‍ನ ರಾಜ್ಯ ವರಿಷ್ಠರು ಕೂಡ ಶಿವಮೊಗ್ಗ ಕ್ಷೇತ್ರದಲ್ಲಿ ಶತಾಯಗತಾಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಯೇ ಸಿದ್ದ ಎಂದು ಹೇಳುತ್ತಿದ್ದರು. ಆದರೆ ಕಡೇಗಳಿಗೆಯಲ್ಲಿ ರಾಹುಲ್ ಗಾಂಧಿ ಕೈಗೊಂಡ ನಿರ್ಧಾರದಿಂದ ಅನಿರ್ವಾಯವಾಗಿ ಕ್ಷೇತ್ರ ಬಿಟ್ಟುಕೊಡುವಂತಾಗಿದೆ. 

'ಮೈತ್ರಿ ಅಭ್ಯರ್ಥಿ' : ದೋಸ್ತಿಗಳ ಅಭಿಪ್ರಾಯವೇನು?

'ಬಿಜೆಪಿಗೆ ಪ್ರಬಲ ಸ್ಪರ್ಧೆ' : ಜೆಡಿಎಸ್ ಮುಖಂಡ ಎಂ.ಶ್ರೀಕಾಂತ್

 'ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಪಕ್ಷವು ಅಭ್ಯರ್ಥಿ ಕಣಕ್ಕಿಳಿಸುತ್ತಿದೆ. ಮೈತ್ರಿ ಪಕ್ಷದ ಅಭ್ಯರ್ಥಿಯಾಗುತ್ತಿರುವ ಮಧು ಬಂಗಾರಪ್ಪರವರು ಬಿಜೆಪಿಗೆ ಪ್ರಬಲ ಪೈಪೋಟಿವೊಡ್ಡಲಿದ್ದಾರೆ. ಅವರ ಗೆಲುವು ನಿಶ್ಚಿತವಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ. ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪ್ರಬಲ ನಾಯಕತ್ವ ಹಾಗೂ ದಿವಂಗತ ಎಸ್.ಬಂಗಾರಪ್ಪರವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕೈಗೊಂಡಿದ್ದ ಕ್ರಮಗಳು ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕವಾಗಲಿದೆ' ಎಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಅಭಿಪ್ರಾಯಪಡುತ್ತಾರೆ. 

'ವರಿಷ್ಠರ ನಿರ್ಧಾರಕ್ಕೆ ಬದ್ದ' : ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ
'ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುವ ವಿಶ್ವಾಸವಿತ್ತು. ಆದರೆ ವಿವಿಧ ಕಾರಣಗಳಿಂದ ಪಕ್ಷದ ವರಿಷ್ಠರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಮುಂದಾಗಿದ್ದಾರೆ. ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೆವೆ. ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಧು ಬಂಗಾರಪ್ಪ ಜಯಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರು ತಿಳಿಸಿದ್ದಾರೆ. 

'ಅ.15 ರಂದು ನಾಮಪತ್ರ ಸಲ್ಲಿಕೆ' : ಜೆಡಿಎಸ್ ಮುಖಂಡ ಜಿ.ಡಿ.ಮಂಜುನಾಥ್ 
'ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪರವರು ಅ. 15 ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿರಲಿದ್ದಾರೆ. ಅತ್ಯಂತ ಸರಳವಾಗಿ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಲಿದೆ. ಜರ್ಮನಿಯಲ್ಲಿರುವ ಮಧು ಬಂಗಾರಪ್ಪರವರು ರವಿವಾರ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ' ಎಂದು ಶಿವಮೊಗ್ಗದ ಜೆಡಿಎಸ್ ಮುಖಂಡ ಜಿ.ಡಿ.ಮಂಜುನಾಥ್‍ರವರು ಮಾಹಿತಿ ನೀಡಿದ್ದಾರೆ. 

 'ಬಿಜೆಪಿ ಸೋಲಿಸುವುದಷ್ಟೆ ಮುಖ್ಯ' : ಕಾಂಗ್ರೆಸ್ ಸ್ಪರ್ಧಾಕಾಂಕ್ಷಿ ಮಲ್ಲಿಕಾರ್ಜುನ ಹಕ್ರೆ
'ಶಿವಮೊಗ್ಗ ಕ್ಷೇತ್ರದಲ್ಲಿ ತಾವು ಸೇರಿದಂತೆ ಹಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದೆವು. ಪಕ್ಷದ ವರಿಷ್ಠರು ಜೆಡಿಎಸ್ ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕೆ ತಾವು ಬದ್ದವಾಗಿದ್ದೆನೆ. ಕೋಮುವಾದಿ ಬಿಜೆಪಿ ಸೋಲಿಸುವುದು ಅತ್ಯಂತ ಮುಖ್ಯವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮಧು ಬಂಗಾರಪ್ಪರ ಗೆಲುವು ಖಚಿತವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ' ಎಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ, ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಹಕ್ರೆಯವರು ತಿಳಿಸಿದ್ದಾರೆ. 

Writer - ವರದಿ : ಬಿ.ರೇಣುಕೇಶ್

contributor

Editor - ವರದಿ : ಬಿ.ರೇಣುಕೇಶ್

contributor

Similar News