ಪುತ್ತೂರು: ಸ್ಕೂಟರ್- ಕಾರು ಢಿಕ್ಕಿ; ಗ್ರಾಮಕರಣಿಕ ಮೃತ್ಯು

Update: 2018-10-15 06:00 GMT

ಪುತ್ತೂರು, ಅ. 15: ಸ್ಕೂಟರ್ ಮತ್ತು ಕಾರೊಂದರ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಪುಣಚ ಗ್ರಾಮಕರಣಿಕರಾಗಿದ್ದ ಕೆಯ್ಯೂರು ನಿವಾಸಿ ಎಸ್.ಬಿ. ಸುದೇಶ್ ರೈ (28) ಎಂದು ಗುರುತಿಸಲಾಗಿದೆ.

ತಿಂಗಳಾಡಿ ಕಡೆಯಿಂದ ಕುಂಬ್ರಕ್ಕೆ ತೆರಳುತ್ತಿದ್ದ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಸುದೇಶ್ ಅವರ ಸ್ಕೂಟರ್ ಮುಖಾಮುಖಿ ಢಿಕ್ಕಿಯಾಗಿತ್ತು ಎಂದು ಹೇಳಲಾಗಿದ್ದು, ಈ ಸಂದರ್ಭ ರಸ್ತೆಗೆಸೆಯಲ್ಪಟ್ಟ ಸುದೇಶ್ ಅವರ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯವಾಗಿತ್ತು.

ಕಾರು ಚಾಲಕ ಅಪಘಾತ ನಡೆದ ಬಳಿಕ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಗಾಯಾಳು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ಗಮನಿಸಿದ ತಿಂಗಳಾಡಿ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ನೌಷಾದ್ ಅವರು ಸ್ಥಳೀಯರಾದ ಹಸೈನಾರ್ ಮತ್ತು ಯೂಸುಫ್ ಎಂಬವರ ಸಹಕಾರದಲ್ಲಿ ಕಾರೊಂದರಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಈ ಸಂದರ್ಭ ಸುದೇಶ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ನಿವೃತ್ತ ಶಿಕ್ಷಕ ಕೆಯ್ಯೂರಿನ ಬಳೆಜ್ಜ ನಿವಾಸಿ ದಿ. ಗುಡ್ಡಪ್ಪ ರೈ ಅವರ ಪುತ್ರ ಸುದೇಶ್ ಈ ಹಿಂದೆ ಪುತ್ತೂರಿನ ಒಳಮೊಗ್ರು ಗ್ರಾಮದ ಗ್ರಾಮಕರಣಿಕನಾಗಿ ಕೆಲಸ ಮಾಡಿದ್ದು, ಕೆಲ ಸಮಯದ ಹಿಂದೆ ಬಂಟ್ವಾಳದ ಪುಣಚ ಗ್ರಾಮದ ಗ್ರಾಮಕರಣಿಕನಾಗಿ ವರ್ಗಾವಣೆಗೊಂಡಿದ್ದರು.

ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನೌಷಾದ್ ಮಾನವೀಯತೆಗೆ ಶ್ಲಾಘನೆ

ಅಪಘಾತಗೊಂಡ ಬಳಿಕ ಸ್ಥಳದಲ್ಲಿ ಹಲವಾರು ಮಂದಿ ಜಮಾಯಿಸಿದ್ದರು. ಆದರೂ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ ಸುದೇಶ್ ಅವರನ್ನು ಯಾರೂ ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿರಲಿಲ್ಲ ಎನ್ನಲಾಗಿದ್ದು, ಈ ಸಂದರ್ಭ ಅದೇ ದಾರಿಯಲ್ಲಿ ತನ್ನ ರಿಕ್ಷಾದಲ್ಲಿ ಬಂದ ನೌಶಾದ್ ಗಾಯಾಳುವನ್ನು ತನ್ನ ರಿಕ್ಷಾದಲ್ಲಿ ಸಾಗಿಸಲು ಪ್ರಯತ್ನ ನಡೆಸಿದರು. ಆದರೆ ಗಂಭೀರ ಗಾಯಗೊಂಡು ಕಾಲು ಮುರಿತಗೊಂಡಿದ್ದ ಅವರನ್ನು ರಿಕ್ಷಾದಲ್ಲಿ ಸಾಗಿಸಲು ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯರೊಬ್ಬರ ಓಮ್ನಿ ಕಾರಿನಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News