'ಕಸಾಯಿಖಾನೆ ವಿವಾದ: ಸಂಘ ಪರಿವಾರದವರಿಗೆ ತಾಕತ್ತಿದ್ದರೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲಿ'

Update: 2018-10-15 07:55 GMT

ಮಂಗಳೂರು, ಅ.15: ದೇಶ ಬೀಫ್ ರಪ್ತಿನದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದು, ಈ ಪೈಕಿ ಶೇ.75ರಷ್ಟು ಸಂಸ್ಥೆಗಳು ಹಿಂದೂಗಳದ್ದು ಹಾಗೂ ಬಿಜೆಪಿ ಸಂಸದರದ್ದು. ಸಂಘ ಪರಿವಾರದವರಿಗೆ ತಾಕತ್ತಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಸವಾಲೆಸೆದಿರುವ ಅವರು, ಸಂಘ ಪರಿವಾರದ್ದು ಗೋ ಮಾತೆಯ ಮೇಲಿನ ನೈಜ ಕಾಳಜಿಯಾಗಿದ್ದರೆ ಕೇಂದ್ರ ಸರಕಾದ ವಿರುದ್ಧ ಪ್ರತಿಭಟಿಸಲಿ ಎಂದರು.

ಸಚಿವ ಖಾದರ್ ಅವರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆಗಳ ಅಭಿವೃದ್ಧಿಯ ಸಲಹೆ ನೀಡಿದ್ದು ಮಾತ್ರ. ಇದನ್ನೇ ನೆಪವಾಗಿಟ್ಟು ವಿಎಚ್‌ಪಿ ಜಿಲ್ಲಾಧ್ಯಕ್ಷರು ಸಚಿವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದು ಜಿಲ್ಲೆಯ ರಾಜಕಾರಣಕ್ಕೆ ಶೋಭೆ ತರುವಂತದ್ದಲ್ಲ ಎಂದವರು ಹೇಳಿದರು. ಕಸಾಯಿಖಾನೆ ವಿವಾದ

ಸ್ವಚ್ಛತೆಯನ್ನು ಉದ್ದೇಶವಾಗಿಟ್ಟು ಸ್ಮಾರ್ಟ್ ಸಿಟಿ ಯೋಜನೆಯಲ್ಲೇ ಕಸಾಯಿಖಾನೆಗಳ ಅಭಿವೃದ್ಧಿಯ ಪ್ರಸ್ತಾಪವಿದೆ. ಬಿಜೆಪಿ ಸಂಸದರು, ಶಾಸಕರು, ಸ್ಮಾರ್ಟ್ ಸಿಟಿಯಲ್ಲಿ ಆ ಪ್ರಸ್ತಾವನೆ ಸೇರಿಸುವ ಮೊದಲೇ ತಡೆಯಬಹುದಿತ್ತು. ಈಗಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ನಗರಾಭಿವೃದ್ಧಿ ಸಚಿವರ ಮೂಲಕ ಅದನ್ನು ಬದಲಾಯಿಸಲು ಸಾಧ್ಯವಿದೆ. ಅದನ್ನು ಬಿಟ್ಟು, ಕೇವಲ ರಾಜಕೀಯ ಉದ್ದೇಶದಿಂದ, ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಅಕ್ರಮ ಗೋ ಸಾಗಾಟ ತಡೆಯಬೇಕಿದೆ. ಆದರೆ, ಇತ್ತೀಚೆಗೆ ಮರೋಳಿ, ಕಾವೂರು, ಕಾರ್ಕಳ, ವಿಟ್ಲದಲ್ಲಿ ನಡೆದ ಗೋ ಸಾಗಾಟ ಪ್ರಕರಣದಲ್ಲಿ ಯಾವ ಸಂಘಟನೆಗೆ ಸೇರಿದವರು ಬಂಧನಕ್ಕೊಳಗಾಗಿದ್ದಾರೆ ಎಂದವರು ಪ್ರಶ್ನಿಸಿದ ಅವರು, ಅಕ್ರಮ ವಹಿವಾಟಿನಲ್ಲಿ ಎಲ್ಲ ಸಮುದಾಯಕ್ಕೆ ಸೇರಿದ ಶೇ.5ರಷ್ಟು ಮಂದಿ ಇದ್ದಾರೆ. ಇದರಿಂದ ಉಳಿದ ಶೇ.95ರಷ್ಟು ಮಂದಿಗೆ ಕೆಟ್ಟ ಹೆಸರು ಬರುತ್ತಿದೆ. ತನ್ನಲ್ಲಿ 45-50 ಗೋವುಗಳಿದ್ದು, ಪ್ರತೀ ವರ್ಷ ಗೋವುಗಳನ್ನು ದಾನ ಮಾಡುತ್ತಿದ್ದೇನೆ. ಸಂಘಟನೆಯವರಿಗೆ ಗೋವುಗಳ ಕುರಿತು ನಿಜವಾದ ಕಾಳಜಿಯಿದ್ದರೆ ದನಗಳನ್ನು ಸಾಕಿ ತೋರಿಸಲಿ ಎಂದು ಸವಾಲು ಹಾಕಿದರು.

ಪಾಲಿಕೆ ಸದಸ್ಯ ಪ್ರವೀಣ್‌ ಚಂದ್ರ ಆಳ್ವ, ಮುಖಂಡರಾದ ಸಂತೋಷ್ ಶೆಟ್ಟಿ, ಗಿರೀಶ್ ಶೆಟ್ಟಿ, ಕಿರಣ್, ರಮಾನಂದ ಪೂಜಾರಿ, ನೀರಜ್ ಪಾಲ್, ಪ್ರೇಮನಾಥ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News