ಗೋವಾ ಬಿಜೆಪಿಯ ವೆಬ್ ಸೈಟ್ ಹ್ಯಾಕ್: ‘ಪಾಕಿಸ್ತಾನ ಝಿಂದಾಬಾದ್’ ಸಂದೇಶ ಪ್ರತ್ಯಕ್ಷ

Update: 2018-10-15 13:18 GMT
ಸಾಂದರ್ಭಿಕ ಚಿತ್ರ

ಪಣಜಿ,ಅ.15: ಗೋವಾ ಬಿಜೆಪಿ ಘಟಕದ ಹಳೆಯ ಜಾಲತಾಣವೊಂದನ್ನು ಹ್ಯಾಕ್ ಮಾಡಿರುವ ಅಪರಿಚಿತ ವ್ಯಕ್ತಿಗಳು ‘ಪಾಕಿಸ್ತಾನ ಝಿಂದಾಬಾದ್’ ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.

ಈ ಸೈಬರ್ ದಾಳಿಯನ್ನು ನಡೆಸಿರಬಹುದಾದ ಗುಂಪನ್ನು ‘ಟೀಂ ಪಿಸಿಇ’ ಮತ್ತು ವ್ಯಕ್ತಿಯ ಹೆಸರನ್ನು ಮುಹಮ್ಮದ್ ಬಿಲಾಲ್ ಎಂದೂ ವೆಬ್‌ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

ದಾಳಿಗೊಳಗಾಗಿರುವ ಜಾಲತಾಣ ಹಳೆಯದಾಗಿದೆ. ನೂತನ ಜಾಲತಾಣದಲ್ಲಿ ಆ್ಯಂಟಿ-ಹ್ಯಾಕಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸೈಬರ್ ದಾಳಿಯಿಂದ ನೂತನ ಜಾಲತಾಣಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಪಕ್ಷದ ಐಟಿ ಸೆಲ್‌ನೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಪದಾಧಿಕಾರಿಯೋರ್ವರು ತಿಳಿಸಿದರು. ಬಿಜೆಪಿ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ತನವಾಡೆ ಅವರು ದಾಳಿಯ ಕುರಿತು ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

 ಪಕ್ಷವು ಈ ಬಗ್ಗೆ ಪೊಲೀಸ್ ದೂರನ್ನು ಇನ್ನಷ್ಟೇ ದಾಖಲಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News