ನೇತಾಜಿ ಮೃತಪಟ್ಟಿದ್ದಾರೆಯೇ ಅಥವಾ ಬದುಕಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಿ: ಎನ್‌ಎಐಗೆ ಸಿಐಸಿ ನಿರ್ದೇಶ

Update: 2018-10-15 13:22 GMT

 ಹೊಸದಿಲ್ಲಿ,ಅ.15: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಮೃತಪಟ್ಟಿದ್ದಾರೆಯೇ ಅಥವಾ ಜೀವಂತವಿದ್ದಾರೆಯೇ ಎಂದು ಪ್ರಧಾನಿ ಕಚೇರಿಯನ್ನು ಪ್ರಶ್ನಿಸಿರುವ ಆರ್‌ಟಿಐ ಅರ್ಜಿದಾರರಿಗೆ ಸ್ಪಷ್ಟ ಉತ್ತರವನ್ನು ನೀಡುವಂತೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ಭಾರತೀಯ ರಾಷ್ಟ್ರೀಯ ಪತ್ರಾಗಾರ(ಎನ್‌ಎಐ)ಕ್ಕೆ ನಿರ್ದೇಶ ನೀಡಿದೆ.

2015 ಮತ್ತು 2016ರಲ್ಲಿ ಬೋಸ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಶ್ರದ್ಧಾಂಜಲಿಗಳನ್ನು ಸಲ್ಲಿಸಿದ್ದೇಕೆ ಎನ್ನುವುದನ್ನು ತಿಳಿಯಲು ಅರ್ಜಿದಾರ ಅವಧೇಶ ಕುಮಾರ ಚತುರ್ವೇದಿ ಬಯಸಿದ್ದರು.

ತನ್ನ ಅರ್ಜಿಗೆ ತೃಪ್ತಿಕರ ಉತ್ತರ ದೊರಕದ ಹಿನ್ನೆಲೆಯಲ್ಲಿ ಚತುರ್ವೇದಿ ಸಿಐಸಿ ಬಾಗಿಲು ಬಡಿದಿದ್ದರು.

ಆರ್‌ಟಿಐ ಅರ್ಜಿಯಲ್ಲಿನ ವಿಷಯವು ಸಂಸ್ಕೃತಿ ಸಚಿವಾಲಯಕ್ಕೆ ಸಂಬಂಧಿಸಿದ್ದರಿಂದ ತಾನು ಅರ್ಜಿಯನ್ನು ಅದಕ್ಕೆ ವರ್ಗಾಯಿಸಿರುವುದಾಗಿ ಪ್ರಧಾನಿ ಕಚೇರಿಯು ತಿಳಿಸಿತ್ತು.

ಬೋಸ್ ಅವರಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ವಿವರ್ಗೀಕರಿಸಲಾಗಿದೆ ಮತ್ತು ಕಾಯಂ ಆಗಿ ಇಟ್ಟುಕೊಳ್ಳಲು ಎನ್‌ಎಐಗೆ ಕಳುಹಿಸಲಾಗಿದೆ ಎಂದೂ ಪ್ರಧಾನಿ ಕಚೇರಿಯು ತಿಳಿಸಿದೆ ಎಂದು ತನ್ನ ಆದೇಶದಲ್ಲಿ ಹೇಳಿರುವ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥೂರ್ ಅವರು,ಅರ್ಜಿದಾರರು ಕೇಳಿರುವ ಪ್ರಶ್ನೆಗೆ 15 ದಿನಗಳಲ್ಲಿ ಸ್ಪಷ್ಟ ಉತ್ತರವನ್ನು ನೀಡುವಂತೆ ಎನ್‌ಎಐಗೆ ನಿರ್ದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News