ಶಬರಿಮಲೆ ದೇವಳ ಪ್ರವೇಶಿಸುತ್ತೇನೆ ಎಂದ ಶಿಕ್ಷಕಿ ಮನೆಗೆ ಸಂಘಪರಿವಾರ ಕಾರ್ಯಕರ್ತರ ಮುತ್ತಿಗೆ

Update: 2018-10-15 14:57 GMT

ಕಣ್ಣೂರು, ಅ.15: ಶಬರಿಮಲೆಯ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ತಲುಪುವುದಾಗಿ ಕೇರಳದ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಿದ ಬಳಿಕ ಅವರ ಮನೆಯನ್ನು ಸುತ್ತುವರಿದ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ಘಟನೆ ನಡೆದಿದೆ.

ಎಲ್ಲಾ ವಯೋಮಾನದ ಮಹಿಳೆಯರೂ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ತಾನು ಸದುಪಯೋಗಪಡಿಸಿಕೊಳ್ಳುವುದಾಗಿ ಕಾಲೇಜು ಉಪನ್ಯಾಸಕಿಯಾಗಿರುವ ಕಣ್ಣೂರಿನ 32 ವರ್ಷದ ರೇಶ್ಮಾ ನಿಶಾಂತ್ ಫೇಸ್‌ಬುಕ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಋತುಮತಿಯಾಗುವುದು ಸಹಜ ದೈಹಿಕ ಪ್ರಕ್ರಿಯೆಯಾಗಿದೆ. ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸುವುದು ಕ್ರಾಂತಿಕಾರಿ ಎನ್ನಬಹುದಾದ ಪ್ರಕ್ರಿಯೆಯಲ್ಲ. ಶಬರಿಮಲೆ ದೇವಸ್ಥಾನವನ್ನು ಯಾರು ಬೇಕಾದರೂ ಪ್ರವೇಶಿಸಬಹುದು. ಒಬ್ಬ ಮಹಿಳೆ ಕೈಗೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಇನ್ನಷ್ಟು ಮಹಿಳೆಯರಿಗೆ ಉತ್ತೇಜನ ನೀಡಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.

ಕಳೆದ 12 ವರ್ಷಗಳಿಂದ ‘ಮಂಡಲ ಕಾಲ’ದ ಸಂದರ್ಭ ತಾನು 41 ದಿನ ವೃತಾಚರಣೆ ನಡೆಸಿದ್ದು ದೇವಸ್ಥಾನ ಪ್ರವೇಶಿಸಿಲ್ಲ. ಆದರೆ ಈ ಬಾರಿ ದೇವಸ್ಥಾನ ಪ್ರವೇಶಿಸುತ್ತೇನೆ . ಈ ವರ್ಷ ತಾನು ಇತರ ಪುರುಷ ಭಕ್ತರಂತೆಯೇ ಮಣಿಗಳ ಸರವನ್ನು ಧರಿಸಲು ಆರಂಭಿಸಿದ್ದೇನೆ ಎಂದು ಹೇಳಿದ್ದರು.

ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಸಂಘಪರಿವಾರದ ಸದಸ್ಯರನ್ನು ಒಳಗೊಂಡಿದ್ದ ಗುಂಪೊಂದು ರೇಶ್ಮಾರ ಮನೆಯ ಎದುರು ಪ್ರತಿಭಟನೆ ನಡೆಸಿದೆ. ಗುಂಪಿನವರು ದೈಹಿಕವಾಗಿ ಹಲ್ಲೆ ನಡೆಸಿಲ್ಲ. ಆದರೆ ಶಬರಿಮಲೆ ದೇವಸ್ಥಾನಕ್ಕೆ ಹೇಗೆ ಪ್ರವೇಶಿಸುತ್ತಿ ನೋಡುವಾ ಎಂದು ಸವಾಲು ಹಾಕಿದ್ದಾರೆ. ಗುಂಪಿನಲ್ಲಿದ್ದ ಕೆಲವರ ಪರಿಚಯ ತನಗಿದೆ ಎಂದು ರೇಶ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮನೆಯವರು ತನ್ನ ಧಾರ್ಮಿಕ ಆಚರಣೆಗೆ ಅಡ್ಡಿಯಾಗಿಲ್ಲ. ಪತಿ ನಿಶಾಂತ್ ತನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ತಮ್ಮ ಐದು ವರ್ಷದ ಮಗಳನ್ನು ಯಾವುದೇ ಧಾರ್ಮಿಕ ಆಚರಣೆ ಅಥವಾ ನಂಬಿಕೆಗೆ ನಾವು ನಿರ್ಬಂಧಿಸಿಲ್ಲ. ಅವಳಿಗೆ ಯಾವುದು ಇಷ್ಟವೋ ಅದನ್ನು ಆಕೆಯೇ ನಿರ್ಧರಿಸಲಿ ಎಂದು ರೇಶ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News