ರಾಜಸ್ಥಾನದಲ್ಲಿ ಮತ್ತೆ 5 ಝೀಕಾ ವೈರಸ್ ಸೋಂಕು ಪತ್ತೆ

Update: 2018-10-15 16:22 GMT

ಜೈಪುರ, ಅ. 15: ಜೈಪುರ ನಗರದಲ್ಲಿ ಮತ್ತೆ 5 ಝೀಕಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ರಾಜಸ್ಥಾನದಲ್ಲಿ ಪತ್ತೆಯಾದ ಝೀಕಾ ವೈರಸ್ ಸೋಂಕು ಪ್ರಕರಣದ ಸಂಖ್ಯೆ 60ಕ್ಕೆ ಏರಿಕೆಯಾಗಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೀಣಾ ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಪುನರ್ ಪರಿಶೀಲನಾ ಸಭೆಯ ಬಳಿಕ ಈ ಅಂಕಿ-ಅಂಶ ಬಿಡುಗಡೆ ಮಾಡಲಾಗಿದೆ. ಶಾಸ್ತ್ರಿ ನಗರ ಪ್ರದೇಶ ಝೀಕಾ ವೈರಸ್‌ನ ಅತಿ ಹೆಚ್ಚು ಸೋಂಕಿಗೆ ಒಳಗಾಗಿದೆ. ಆದರೆ, ಸ್ಟೇಷನ್ ರಸ್ತೆಯಲ್ಲಿರುವ ರಜಪೂತ್ ಹಾಸ್ಟೆಲ್ ಹಾಗೂ ವಿದ್ಯಾಧರ್ ನಗರ ಪ್ರದೇಶದಲ್ಲಿ ಕೂಡ ಝಿಕಾ ವೈರಸ್‌ನ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಝೀಕಾ ವೈರಸ್ ಸೋಂಕು ಹರಡುತ್ತದೆ ಎಂದು ಹೇಳಿರುವ ವೀಣಾ ಗುಪ್ತಾ, ನಗರದ ಇತರ ಭಾಗಗಳಲ್ಲಿ ಯಾದೃಚ್ಛಿಕ ಸಮೀಕ್ಷೆ ನಡೆಸಲಾಗಿದೆ. ಆದರೆ, ಇದುವರೆಗೆ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಝೀಕಾ ವೈರಸ್ ಸೋಂಕಿಗೆ ತುತ್ತಾಗಿದ್ದ 60 ಮಂದಿಯಲ್ಲಿ 45 ಮಂದಿ ಗುಣಮುಖರಾಗುತ್ತಿದ್ದಾರೆ. 15 ಮಂದಿಯನ್ನು ಇನ್ನೂ ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್ ಹಾಗೂ ಲಾರ್ವ ನಿಗ್ರಹ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಇದನ್ನು ನಗರದ ಇತರ ಭಾಗಕ್ಕೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಜಿಲ್ಲಾಡಳಿತ, ಜೈಪುರ ಮಹಾನಗರ ಪಾಲಿಕೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಆರೋಗ್ಯ ಇಲಾಖೆಯ ನೆರವಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಜ್ವರ ಪೀಡಿತರನ್ನು ಮುಖ್ಯವಾಗಿ ಜ್ವರ ಪೀಡಿತ ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬಾಧಿತ ಪ್ರದೇಶಗಳಲ್ಲಿ ಸುಮಾರು 280 ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News