ಮೆಲ್ಕಾರ್ ಮಹಿಳಾ ಕಾಲೇಜು ದಶಮಾನೋತ್ಸವ: ಲಾಂಛನ ಬಿಡುಗಡೆ

Update: 2018-10-15 18:40 GMT

ಮಂಗಳೂರು, ಅ.15: ಮಂಗಳೂರು ಎಜುಕೇಶನ್ ಎನ್ ಹ್ಯಾನ್ಸ್ ಮೆಂಟ್ ಟ್ರಸ್ಟ್‌ನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು ದಶಮಾನೋತ್ಸವದ ಲಾಂಛನವನ್ನು ಕಣ್ಣೂರು ಮತ್ತು ಕಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ. ಯು.ಅಬ್ದುಲ್ ರಹಿಮಾನ್ ಅವರು  ಸೋಮವಾರ ಬಿಡುಗಡೆ ಮಾಡಿದರು.

ಕಾಲೇಜು ಆರಂಭವಾಗಿ ಪ್ರಸಕ್ತ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 2019ನೇ ಜನವರಿ 3, 4 ಮತ್ತು 5ರಂದು ಮೂರು ದಿನಗಳ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಮೊದಲನೇ ದಿನ ಧ್ವಜಾರೋಹಣದೊಂದಿಗೆ ಉದ್ಘಾಟನೆಗೊಂಡು ದಶಮಾನೋತ್ಸವ ಸಭಾ ಕಾರ್ಯಕ್ರಮ, ಮಧ್ಯಾಹ್ನ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಎರಡನೇ ದಿನ ಬೆಳಗ್ಗೆ ಧಾರ್ಮಿಕ ಪ್ರವಚನ, ಮಧ್ಯಾಹ್ನ ನಂತರ ಸರ್ವಧರ್ಮ ಸದ್ಭಾವನಾ ಕಾರ್ಯಕ್ರಮ ಹಾಗೂ ಕೊನೆಯ ದಿನ ಪ್ರತಿಭಾ ಪುರಸ್ಕಾರ ದೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಮೂರು ದಿನದ ಕಾರ್ಯಕ್ರಮಗಳಿಗೆ ಖ್ಯಾತ ಶೈಕ್ಷಣಿಕ ತಜ್ಞರು, ಸಮಾಜ ಸೇವಕರು ಹಾಗೂ ವಿವಿಧ ಕ್ಷೇತ್ರದ ಗಣ್ಯರನ್ನು ಆಮಂತ್ರಿಸಲು ನಿರ್ಧರಿಸಲಾಯಿತು.

ಮಂಗಳೂರು ಎಜುಕೇಶನ್ ಎನ್‌ಹ್ಯಾನ್ಸ್‌ಮೆಂಟ್ ಟ್ರಸ್ಟ್‌ನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು 2009-10ನೇ ಶೈಕ್ಷಣಿಕ ಸಾಲಿನಿಂದ 50 ವಿದ್ಯಾರ್ಥಿಗಳೊಂದಿಗೆ ಆರಂಭವಾಯಿತು. ಪಿಯುಸಿ, ಕಲಾ, ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗ ಹಾಗೂ 2012-13ನೇ ಸಾಲಿನಿಂದ ಬಿ.ಎ ಮತ್ತು ಬಿ.ಕಾಂ ಪದವಿ ಸಂಯೋಜನೆಗಳೊಂದಿಗೆ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶದ ಶೈಕ್ಷಣಿಕ ಪ್ರಗತಿಗೆ ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತುತ ಸುಮಾರು 550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತೀ ಶೈಕ್ಷಣಿಕ ವರ್ಷದಲ್ಲೂ ಕಾಲೇಜು ಉತ್ತಮ ಫಲಿತಾಂಶ ನೀಡುತ್ತಿದೆ. ಕಳೆದ 2017-18ನೇ ಸಾಲಿನಲ್ಲಿ ಪದವಿ ವಿಭಾಗಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿದೆ.

ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನ ಅಧ್ಯಕ್ಷ ಎಸ್.ಎಂ. ರಶೀದ್, ಆಡಳಿತ ಟ್ರಸ್ಟಿಗಳಾದ ಬಿ.ಅಬ್ದುಲ್ ಅಝೀಝ್, ಮನ್ಸೂರ್ ಅಹ್ಮದ್, ಕಾಲೇಜು ಪ್ರಾಂಶುಪಾಲ ಅಬ್ದುಲ್ ಲತೀಫ್, ಸಲಹೆಗಾರ ಅಬ್ದುಲ್ ಹಮೀದ್ ಮಾಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News