ಸಜಿಪನಡು: ಎಚ್1ಎನ್1 ಹಾವಳಿಗೆ ಮತ್ತೊಂದು ಬಲಿ

Update: 2018-10-16 05:32 GMT

ಬಂಟ್ವಾಳ, ಅ.16: ಮಹಾಮಾರಿ‌ ಎಚ್1ಎನ್1 ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಜಿಪನಡು ನಿವಾಸಿ ಮಹಿಳೆಯೊಬ್ಬರು ಇಂದು ಮುಂಜಾನೆ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಇದರೊಂದಿಗೆ ಕಳೆದ ಆರು ದಿನಗಳಲ್ಲಿ ಒಂದೇ ಮನೆಯಲ್ಲಿ ತಾಯಿ-ಮಗಳು ಇಬ್ಬರು ಈ ಸೋಂಕಿಗೆ  ಬಲಿಯಾಗಿದ್ದು, ಸಂತ್ರಸ್ಥ ಕುಟುಂಬ ತಲ್ಲಣಗೊಂಡಿದ್ದರೆ, ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.

ಎಚ್1ಎನ್1 ಬಾಧಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ದಿವಂಗತ ಮಯ್ಯದ್ದಿ ಅವರ ಪುತ್ರಿ ಝಬೀನಾ (22) ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಝಬೀನಾ ಅವರ ತಾಯಿ ಅವ್ವಮ್ಮ(44) ಅ.10ರಂದು ಎಚ್1ಎನ್1 ಬಾಧಿತರಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. 

''ಅವ್ವಮ್ಮ ಎಚ್1ಎನ್1 ಬಾಧಿತರಾಗಿ ಮೃತಪಟ್ಟಿರುವುದಾಗಿ ಈಗಾಗಲೇ ದೃಢಪಡಿಸಿರುವ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಅವರ ಮಗಳು ಝುಬೀನಾ ಕೂಡಾ ಎಚ್1ಎನ್1 ಬಾಧಿತರಾಗಿದ್ದರೆಂದು ಬಗ್ಗೆ ಮಾಹಿತಿ ನೀಡಿದ್ದಾರೆ. ಸಜಿಪನಡು ಗ್ರಾಮದ ಜ್ವರಪೀಡಿತ ಇನ್ನೋರ್ವ ವ್ಯಕ್ತಿ ಕೂಡಾ ಎಚ್1ಎನ್1 ಶಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ ಎಂದು ಡಾ.ದೀಪಾ ಪ್ರಭು ತಿಳಿಸಿದ್ದಾರೆ.

ಎರಡು ವಾರದಲ್ಲಿ ಒಂದೇ ಮನೆಯ ನಾಲ್ವರು ಮೃತ್ಯು: 
ಕಳೆದ ಏಳೆಂಟು ತಿಂಗಳುಗಳಿಂದ ಅನಾರೋಗ್ಯದ ಬಳಲುತ್ತಿದ್ದ ಈ ಮನೆಯ ಯಜಮಾನ ಮಯ್ಯದ್ದಿ ಅ.1ರಂದು ಮನೆಯಲ್ಲಿ ಮೃತಪಟ್ಟಿದ್ದರು. ಮಯ್ಯದ್ದಿ ಅವರಿಗೆ ನಾಲ್ಕು ಮಕ್ಕಳಲ್ಲಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಇಬ್ಬರು ಹೆಣ್ಣು ಮಕ್ಕಳಲ್ಲಿ 2ನೆಯವರಾಗಿದ್ದಾರೆ ಇಂದು ಮೃತಪಟ್ಟ ಝಬೀನಾ. ಝಬೀನಾ ಅವರ ನವಜಾತ ಶಿಶು ಸಿಂಡ್ರೋಮ್‌ನಿಂದ ಅ.4ರಂದು ಕೊನೆಯುಸಿರೆಳೆದಿತ್ತು. ಎಚ್1ಎನ್1 ಬಾಧಿತ ಮಯ್ಯದ್ದಿ ಅವರ ಪತ್ನಿ ಅವ್ವಮ್ಮ ಅ.10ರಂದು ಮೃತಪಟ್ಟಿದ್ದಾರೆ. ಎರಡು ವಾರದಲ್ಲಿ ನಡೆದ ನಾಲ್ಕು ಮರಣದಿಂದ ಇಡೀ ಕುಟುಂಬವೇ ತಲ್ಲಣಗೊಂಡಿದ್ದು, ಮನೆಯೇ ಶೋಕಸಾಗರದಲ್ಲಿ ಮುಳುಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News