ಪುತ್ತೂರು: ಸ್ಫೋಟಕ ಬಳಸಿ ಮನೆಮಂದಿಯ ಕೊಲೆಗೆ ಯತ್ನ; ಮಹಿಳೆಗೆ ಗಾಯ

Update: 2018-10-16 08:05 GMT

ಪುತ್ತೂರು, ಅ.16: ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಕವಾಗಿ ಬಳಸಿ ದುಷ್ಕರ್ಮಿಗಳು ಮನೆಯೊಂದನ್ನು ಸ್ಫೋಟಿಸಿ ಮನೆಮಂದಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಕಬಕ ಪೋಳ್ಯ ಎಂಬಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ. ಘಟನೆಯಲ್ಲಿ ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರ ತಡರಾತ್ರಿ ಇವರ ಮನೆಯ ಸುತ್ತಲೂ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಕವಾಗಿ ಇರಿಸಿ ಮನೆಯನ್ನು ಸ್ಫೋಟಿಸಲು ಯತ್ನಿಸಿರುವುದಾಗಿ ಪುತ್ತೂರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಸ್ಫೋಟಕ ಸಿಡಿದು ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಮನೆಯ ಹೊರಭಾಗದ ನಾಲ್ಕು ಮೂಲೆಗಳಲ್ಲಿ ಬಂಡೆ ಒಡೆಯಲು ಬಳಸುವ ಜಿಲೆಟಿನ್ ಕಡ್ಡಿಗಳನ್ನು ಅಳವಡಿಸಿ ಮನೆ ಮಂದಿಯನ್ನು ಕೊಲ್ಲುವ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಸೋಮವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಮನೆಯ ಹೊರಗಡೆ ಯಾರೋ ಓಡಾಡಿದ ಸದ್ದು ಕೇಳಿಸಿತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಪ್ರಸಾದ್ ಹಾಗೂ ಅವರ ಪತ್ನಿ ಶಾಲಿನಿ ಹೊರಗೆ ಬಂದಾಗ ವ್ಯಕ್ತಿಯೋರ್ವ ಜಿಲೆಟಿನ್ ಕಡ್ಡಿಗೆ ಬೆಂಕಿಕೊಟ್ಟು ಪರಾರಿಯಾಗಿದ್ದಾನೆ. ಈ ವೇಳೆ ಜಿಲೆಟಿನ್ ಸ್ಫೋಟಗೊಂಡಿದ್ದರಿಂದ ಶಾಲಿನಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೃತ್ಯ ಎಸಗಲು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಕೇರಳ ಮೂಲದ ಬಾಬು ಎಂಬವರು ನಾರಾಯಣ ಪ್ರಸಾದ್ ಅವರ ಮನೆಯ ಆವರಣದ ರೂಂ ಒಂದರಲ್ಲಿ ವಾಸವಾಗಿದ್ದರು. ವಿಪರೀತ ಕುಡಿಯುವ ಚಟ ಹೊಂದಿದ್ದ ಈತನನ್ನು ಮನೆಗೆ ಬರದಂತೆ ನಾರಾಯಣ ಪ್ರಸಾದ್ ಸೂಚಿಸಿದ್ದರು. ಇದರಿಂದ ಕೋಪಗೊಂಡ ಬಾಬು ಈ ಕೃತ್ಯ ಎಸಗಿರಬಹುದೆಂದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

 ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಡಿಷನಲ್ ಎಸ್ಪಿ ಸಜಿತ್, ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News