ಕುದ್ರೋಳಿ ವಧಾಗೃಹ ಅಭಿವೃದ್ಧಿ ಪ್ರಸ್ತಾಪ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿಗೆ ಪತ್ರ: ಸಚಿವ ಖಾದರ್

Update: 2018-10-16 07:37 GMT

ಮಂಗಳೂರು, ಅ.16: ಸ್ವಚ್ಛ ಮಂಗಳೂರು ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಪ್ರಾಣಿ ವಧಾಗೃಹವನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪದ ಕುರಿತು ಎಬ್ಬಿಸಲಾಗಿರುವ ವಿರೋಧ ಹಾಗೂ ಹೇಳಿಕೆಗಳಿಂದ ಬೇಸರವಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವರಿಗೆ ಪ್ರಸ್ತಾಪದ ವಿವರ ನೀಡಿ ಪತ್ರ ಬರೆಯುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಪೂರಕವಾಗಿ ಕುದ್ರೋಳಿ ವಧಾಗೃಹದ ಅಭಿವೃದ್ಧಿಗೆ 15 ಕೋಟಿ ರೂ.ಗಳ ಪ್ರಸ್ತಾಪವನ್ನು ನಾನು ಇರಿಸಿದ್ದೆ. ಇದೇ ವಿಚಾರವಾಗಿ ಸ್ಮಾರ್ಟ್ ಸಿಟಿ ಸಲಹಾ ಮಂಡಳಿ ಸಭೆಯಲ್ಲಿ ಪ್ರಸ್ತಾಪ ಇರಿಸಿದ್ದೆ. ಅದು ಮಂಡಳಿಯಲ್ಲಿ ಅಂಗೀಕಾರಗೊಂಡು ಇದೀಗ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಅನುಮತಿಗೆ ರವಾನೆಯಾಗಿದೆ. ಆದರೆ ಈ ನಡುವೆ ಜನಪ್ರತಿನಿಧಿಗಳು ಹೇಳಿಕೆ, ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ. ಇದರಿಂದ ನನಗೆ ಬೇಸರವಾಗಿದೆ ಎಂದು ಹೇಳಿದರು.

ಜನರಿಗೆ ಆರೋಗ್ಯಕರ ಆಹಾರ ಸಿಗುವ ನಿಟ್ಟಿನಲ್ಲಿ ನಾನು ಮಾಡಿರುವುದು ಪ್ರಸ್ತಾಪವಷ್ಟೇ ಅದಕ್ಕಿನ್ನೂ ಕೇಂದ್ರ ಸರಕಾರದಿಂದ ಅನುಮತಿ ದೊರೆಯಬೇಕಿದೆ. ಈ ವಿಷಯದಲ್ಲಿ ಆರೋಪ-ಪ್ರತ್ಯಾಪರೋಪಗಳ ಮೂಲಕ ಜನರ ಮಧ್ಯೆ ಗೊಂದಲ ಸೃಷ್ಟಿಸುವುದು ಬೇಡ. ಅದಕ್ಕಾಗಿ ತಾನು ಪ್ರಧಾನಿ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದು, ಅದರಲ್ಲಿ ವಿಚಾರವನ್ನು ಸಮಗ್ರವಾಗಿ ಪ್ರಸ್ತಾಪಿಸುತ್ತಿದ್ದೇನೆ. ಇದಕ್ಕೆ ಅನುಮತಿ ನೀಡುವ ಬಗ್ಗೆ ಕೇಂದ್ರ ಸರಕಾರವೇ ನಿರ್ಧರಿಸಲಿ. ಅದೇ ವೇಳೆ ಗೋಶಾಲೆಗೆ ಅನುದಾನ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರಿಂದ ಬರುವ ಉತ್ತರ, ಪ್ರತಿಕ್ರಿಯೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖಾದರ್ ನುಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ, ಜಿಲ್ಲೆಯಲ್ಲಿ ಜನತಾದರ್ಶನ ನಡೆಸಲು ಮನವಿ ಮಾಡಿದ್ದು, ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಖಾದರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News