ಕುಂದಾಪುರ: ಮರಳು ಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.15ರಿಂದ ಅನಿರ್ಧಿಷ್ಟಾವಧಿ ಮುಷ್ಕರ

Update: 2018-10-16 12:12 GMT

ಕುಂದಾಪುರ, ಅ.16: ಉಡುಪಿ ಜಿಲ್ಲೆಯ ಜನಸಾಮಾನ್ಯರನ್ನು ವಿಪರೀತ ಕಾಡುತ್ತಿರುವ ಮರಳು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನ.15ರಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಜಿಲ್ಲೆಯ ಕಟ್ಟಡ ಕಾರ್ಮಿಕರು ಅನಿರ್ಧಿಷ್ಟಾವಧಿ ಅಹೋರಾತ್ರಿ ಮುಷ್ಕರ ಆರಂಭಿಸಲು ಇತ್ತೀಚೆಗೆ ಉಡುಪಿ ಯಲ್ಲಿ ನಡೆದ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಮತ್ತು ಕುಂದಾಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘ(ಸಿಐಟಿಯು- ಸಿಡಬ್ಲೂಎಫ್‌ಐ)ದ ಜಂಟಿ ಸಭೆಯಲ್ಲಿ ನಿರ್ಧರಿಸಲಾಯಿತು.

ಮರಳಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಹಾಗೂ ಗಣಿ ಸಚಿವರು ಸ್ಥಳಕ್ಕೆ ಬಂದು ಲಿಖಿತವಾಗಿ ಭರವಸೆ ನೀಡುವವರೆಗೆ ಮುಷ್ಕರ ಕೈಬಿಡಬಾರದು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ಹೋರಾಟದ ಪೂರ್ವಭಾವಿಯಾಗಿ ಸರಕಾರದ ಮೇಲೆ ಒತ್ತಡ ತರಲು ಅ.23ರಂದು ಕುಂದಾಪುರ ತಾಲೂಕು ಪಂಚಾಯತ್ ಎದುರು ಬೆಳಿಗ್ಗೆ 9:30ಕ್ಕೆ ಮತ್ತು ಬೈಂದೂರು ತಹಶೀಲ್ದಾರರ ಕಛೇರಿ ಮುಂಭಾಗ ಬೆಳಗ್ಗೆ 10 ಗಂಟೆಗೆ ಕಟ್ಟಡ ಕಾರ್ಮಿಕರು ಧರಣಿ ನಡೆಸಲಿದ್ದಾರೆ ಎಂದು ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ ಕುಂದಾಪುರ ಹಾಗೂ ಶೇಖರ ಬಂಗೇರ ಉಡುಪಿ ತಿಳಿಸಿದರು.

ಅ.17ರ ಜಿಲ್ಲಾ ಬಂದ್ ಕುರಿತು ಕಟ್ಟಡ ಕಾರ್ಮಿಕರ ಸಂಘಗಳಿಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಇದರಲ್ಲಿ ಸಂಘ ಭಾಗವಹಿಸು ವುದಿಲ್ಲ. ಬದಲಾಗಿ ಅ.23 ಮತ್ತು ನ.15ರ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಜಿಲ್ಲೆಯ ಕಟ್ಟಡ ಕಾರ್ಮಿಕರು ಸಕ್ರೀಯವಾಗಿ ತೊಡಗಿಸಿಕೊಂಡು ಮುಷ್ಕರ ಯಶಸ್ವಿ ಮಾಡಲು ಪ್ರಯತ್ನಿಸಲಿರುವರು ಎಂದು ಸಂಘ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News