ವಂಚನೆ ಆರೋಪ: ಎಂಇಪಿ ನಾಯಕಿ ನೌಹೇರಾ ಶೇಖ್ ಬಂಧನ

Update: 2018-10-16 16:41 GMT

ಹೈದರಾಬಾದ್, ಅ.16: ದೇಶಾದ್ಯಂತ ಜನರಿಂದ ನೂರಾರು ಕೋಟಿ ರೂ. ಸಂಗ್ರಹಿಸಿ ವಂಚಿಸಿದ ಆರೋಪದಲ್ಲಿ ಎಂಇಪಿ ಪಕ್ಷದ ನಾಯಕಿ, ಹೀರಾ ಗೋಲ್ಡ್ ಮಾಲಕಿ ಡಾ. ಆಲಿಮಾ ನೌಹೇರಾ ಶೇಕ್‌ರನ್ನು ಪೊಲೀಸರು ಮಂಗಳವಾರ ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೀರಾ ಗೋಲ್ಡ್ ಸಮೂಹದ ಸ್ಥಾಪಕಿ ಮತ್ತು ಮುಖ್ಯ ನಿರ್ವಾಹಕ ಅಧಿಕಾರಿಯಾಗಿರುವ ನೌಹೇರಾ ಓರ್ವ ಉದ್ಯಮಿ ಮತ್ತು ರಾಜಕಾರಣಿಯೂ ಆಗಿದ್ದಾರೆ. ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡುವುದಾಗಿ ಜನರನ್ನು ನಂಬಿಸಿ ಅವರಿಂದ ನೂರಾರು ಕೋಟಿ ರೂ. ಸಂಗ್ರಹಿಸಿದ ಆರೋಪ ನೌಹೇರಾ ಮೇಲಿದೆ. ಹೀರಾ ಗ್ರೂಪ್ ವಿರುದ್ಧ ಹೈದರಾಬಾದ್, ಬೆಂಗಳೂರು ಮತ್ತು ಮುಂಬೈಯಲ್ಲಿ ಅನೇಕ ದೂರು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಂತ ಕಡಿಮೆ ಸಮಯದಲ್ಲಿ ನೌಹೇರಾ ಶೇಕ್ ಕೋಟ್ಯಂತರ ಹಣ ಗಳಿಸಿದ್ದರು. ಆಕೆಯ ಬಂಧನದಿಂದ ಲಕ್ಷಾಂತರ ಠೇವಣಿದಾರರು ಆತಂಕಿತರಾಗಿದ್ದಾರೆ. ತಮ್ಮ ಹಣ ವಾಪಸ್ ನೀಡಲು ಹೀರಾ ಗ್ರೂಪ್ ವಿಳಂಬ ಮಾಡುತ್ತಿರುವುದರ ವಿರುದ್ಧ ಹೂಡಿಕೆದಾರರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನೂರಕ್ಕೂ ಅಧಿಕ ಪ್ರತಿಭಟನಾಕಾರರು ಹೀರಾ ಗ್ರೂಪ್‌ನಿಂದ ಮೋಸಕ್ಕೊಳಗಾದ ದೇಶದ ಇತರ ಭಾಗಗಳ ಜನರ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News