ದೋಷಪೂರಿತ ಏರ್‌ಕಂಡಿಷನರ್‌: ಹಿಟಾಚಿ ಕಂಪೆನಿಗೆ 5.40 ಲಕ್ಷ ರೂ.ದಂಡ

Update: 2018-10-16 14:50 GMT

ಹೊಸದಿಲ್ಲಿ,ಅ.16: ಪ್ರವಾಸ ಸಂಸ್ಥೆಯೊಂದಕ್ಕೆ ದೋಷಪೂರಿತ ಏರ್‌ಕಂಡಿಷನರ್ ಗಳನ್ನು ಪೂರೈಸಿದ್ದ ತಪ್ಪಿಗಾಗಿ 5.40 ಲ.ರೂ.ಪರಿಹಾರವನ್ನು ನೀಡುವಂತೆ ಹಿಟಾಚಿ ಏರ್ ಕಂಡಿಷನಿಂಗ್ ಇಂಡಿಯಾ ಲಿಮಿಟೆಡ್‌ನ ದಿಲ್ಲಿ ಫ್ರಾಂಚೈಸಿಗೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಇತ್ಯರ್ಥ ಆಯೋಗ(ಎನ್‌ಸಿಡಿಆರ್‌ಸಿ)ವು ಆದೇಶಿಸಿದೆ.

ದಿಲ್ಲಿಯ ಸ್ಟಿಕ್ ಟ್ರಾವೆಲ್ಸ್ ಪ್ರೈ.ಲಿ.ಸಂಸ್ಥೆಯು 2002ರಲ್ಲಿ ಆಮ್ಟ್ರೆಕ್ಸ್ ಹಿಟಾಚಿ ಅಪ್ಲೈಯನ್ಸಸ್ ಲಿ.(ಈಗ ಹಿಟಾಚಿ ಏರ್ ಕಂಡಿಷನಿಂಗ್ ಇಂಡಿಯಾ ಲಿ.)ನಿಂದ 19,37,820 ರೂ.ಗಳನ್ನು ತೆತ್ತು ಏರ್‌ಕಂಡಿಷನರ್‌ಗಳನ್ನು ಖರೀದಿಸಿತ್ತು ಮತ್ತು ಪೂರಕ ಕಾಮಗಾರಿಗಳ ವೆಚ್ಚವಾಗಿ 2,12,180 ರೂ.ಗಳನ್ನು ಪಾವತಿಸಿತ್ತು. ಆದರೆ ಒಂದು ವರ್ಷದ ಬಳಿಕ ಏರ್‌ಕಂಡಿಷನರ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿತ್ತು.

ಸ್ಟಿಕ್ ಈ ಬಗ್ಗೆ ಹಿಟಾಚಿಗೆ ದೂರಿಕೊಂಡಾಗ,ಅಳವಡಿಸಲಾಗಿರುವ ಏರ್‌ಕಂಡಿಷನ್‌ಗಳಲ್ಲಿ ಯಾವುದೇ ದೋಷವಿಲ್ಲ,ವಿದ್ಯುತ್ ಅಥವಾ ಇತರ ಸಮಸ್ಯೆಗಳಿರಬಹುದು ಎಂದು ಅದು ಪ್ರತಿಪಾದಿಸಿತ್ತು. ಕಂಪನಿಯ ಸಲಹೆಯ ಮೇರೆಗೆ ಸ್ಟಿಕ್ ಹೆಚ್ಚುವರಿ ಏರ್‌ಕಂಡಿಷನರ್‌ಗಳನ್ನು ಅಳವಡಿಸಿದ್ದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿರಲಿಲ್ಲ. ನೊಂದ ಸ್ಟಿಕ್ ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸೇವಾಲೋಪಕ್ಕಾಗಿ 10 ಲ.ರೂ.ಪರಿಹಾರ ಪಾವತಿಸುವಂತೆ ಅದು ಹಿಟಾಚಿ ಗೆ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಹಿಟಾಚಿ ಎನ್‌ಸಿಡಿಆರ್‌ಸಿ ಮೆಟ್ಟಿಲನ್ನೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ದಿಲ್ಲಿ ರಾಜ್ಯ ಆಯೋಗದ ಆದೇಶವನ್ನು ತಳ್ಳಿಹಾಕಿದೆ ಮತ್ತು 45 ದಿನಗಳಲ್ಲಿ ಸ್ಟಿಕ್‌ಗೆ 5.40 ಲ.ರೂ.ಗಳ ಪರಿಹಾರವನ್ನು ಪಾವತಿಸುವಂತೆ ಹಿತಾಚಿಗೆ ಆದೇಶಿಸಿದೆ.

ಹೆಚ್ಚುವರಿ ಏರ್‌ಕಂಡಿಷನರ್‌ಗಳ ಸ್ಥಾಪನೆಯ ಬಳಿಕವೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ,ಹೀಗಾಗಿ ದೂರುದಾರರು(ಸ್ಟಿಕ್) ಪರಿಹಾರವನ್ನು ಪಡೆಯಲು ಖಂಡಿತ ಅರ್ಹರಾಗಿದ್ದಾರೆ ಎಂದು ಆಯೋಗದ ಅಧ್ಯಕ್ಷ ಪ್ರೇಮ್ ನಾರಾಯಣ್ ಆದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News