ಭಾರತಕ್ಕೆ ಸದೃಢ, ನಿರ್ಣಾಯಕ ಸರಕಾರದ ಅಗತ್ಯವಿದೆ: ಅರುಣ್ ಜೇಟ್ಲಿ

Update: 2018-10-16 15:17 GMT

ಹೊಸದಿಲ್ಲಿ,ಅ.16: ಭಾರತವು ತನ್ನ ಏರುಗತಿಯ ಬೆಳವಣಿಗೆಯನ್ನು ಮುಂದುವರಿಸಲು ಮತ್ತು ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲು ಕೇಂದ್ರದಲ್ಲಿ ಸದೃಢ ಮತ್ತು ನಿರ್ಣಾಯಕ ನಾಯಕತ್ವವನ್ನು ಹೊಂದಿರುವುದು ಅಗತ್ಯವಾಗಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಮಂಗಳವಾರ ಇಲ್ಲಿ ಹೇಳಿದರು.

ಭಾರತವು ಎದುರಿಸುತ್ತಿರುವ ಸವಾಲುಗಳನ್ನು ಬಿಚ್ಚಿಟ್ಟ ಅವರು,ಭಾರತವು ಆಮದು ತೈಲವನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ಜಾಗತಿಕ ಕಚ್ಚಾತೈಲ ಬೆಲೆಗಳಲ್ಲಿ ಏರಿಕೆಯು ದೇಶದ ಮೆಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ,ಹೀಗಾಗಿ ಇದನ್ನು ಎದುರಿಸಲು ಆರ್ಥಿಕತೆಯು ಪುಟಿದೇಳುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ ಎಂದರು.

ದುರ್ಬಲ ನಾಯಕತ್ವವಿದ್ದರೆ ಈಗಿನ ಸರಕಾರವು ಮಾಡಿದಂತೆ ಐಎಲ್ ಆ್ಯಂಡ್ ಎಫ್‌ಎಸ್‌ನ ಬಿಕ್ಕಟ್ಟನ್ನು ಕೆಲವೇ ದಿನಗಳಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಸೋಚಾಮ್‌ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದ ಜೇಟ್ಲಿ ಹೇಳಿದರು.

 ಸಾಲದ ಹೊರೆಯಿಂದ ತತ್ತರಿಸುತ್ತಿದ್ದ ಐಎಲ್ ಆ್ಯಂಡ್ ಎಫ್‌ಎಸ್ ಮತ್ತು ಅದರ ಸಮೂಹ ಸಂಸ್ಥೆಗಳು ಸಾಲ ಮರುಪಾವತಿಸಲು ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ಸರಕಾರವು ಅದರ ಆಡಳಿಯ ಮಂಡಳಿಯನ್ನು ರದ್ದುಗೊಳಿಸಿ ಖ್ಯಾತ ಬ್ಯಾಂಕರ್ ಉದಯ ಕೋಟಕ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದೆ.

 ದೇಶವು ಎದುರಿಸುತ್ತಿರುವ ರಾಜಕೀಯ ಸವಾಲುಗಳ ಕುರಿತು ಮಾತನಾಡಿದ ಅವರು, ಅಸ್ಥಿರ ಮೈತ್ರಿಕೂಟಗಳು ಮತ್ತು ಉನ್ನತ ಸ್ಥಾನವನ್ನು ಪಡೆಯಲು ಹಾತೊರೆಯುತ್ತಿರುವ ಮಹತ್ವಾಕಾಂಕ್ಷಿ ರಾಜಕಾರಣಿಗಳು ಇದಕ್ಕೆ ಕಾರಣರಾಗಿದ್ದಾರೆ ಎಂದರು.

ಭಾರತವು ಹೆಚ್ಚಿನ ಬೆಳವಣಿಗೆಯ ಪಥವನ್ನು ಮುಂದುವರಿಸಿದರೆ ದೇಶವು ಬಡತನದಿಂದ ಪಾರಾಗಿ ಶ್ರೀಮಂತ ರಾಷ್ಟ್ರವಾಗಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಿರ್ಧಾರಕ ಸರಕಾರವು ಅಗತ್ಯವಾಗಿದೆ ಎಂದರು.

ಕೆಲವು ರಾಷ್ಟ್ರಗಳ ಆಂತರಿಕ ನೀತಿಗಳು ಭಾರತದ ಮೇಲೆ ಪರಿಣಾಮಗಳನ್ನುಂಟು ಮಾಡಿವೆ ಎಂದ ಜೇಟ್ಲಿ,ಇಂತಹ ಪರಿಣಾಮಗಳು ಶಾಶ್ವತವಲ್ಲ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಈ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News