ಸಕಾಲ ಕೌಂಟರ್‌ನಲ್ಲಿ ಡಿಸ್‌ಪ್ಲೇ ಬೋರ್ಡ್ ಕಡ್ಡಾಯ: ಮಥಾಯಿ

Update: 2018-10-16 15:35 GMT

ಮಂಗಳೂರು, ಅ.16: ಸಕಾಲ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರ ನಿರ್ಧರಿಸಿದ್ದು, ಎಲ್ಲ ಸಕಾಲ ಕೌಂಟರ್‌ಗಳಲ್ಲೂ ಅಲ್ಲಿ ದೊರೆಯುವ ಸೌಲಭ್ಯ, ಸೇವೆಗಳನ್ನೊಳಗೊಂಡ ಡಿಸ್‌ಪ್ಲೇ ಬೋರ್ಡ್‌ನ್ನು ಕಡ್ಡಾಯವಾಗಿ ಹಾಕಬೇಕು ಎಂದು ಕರ್ನಾಟಕ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಮಥಾಯಿ ಖಡಕ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಕಾಲದ ಬಗ್ಗೆ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಡಿಸ್‌ಪ್ಲೇ ಬೋರ್ಡ್‌ ಗಳಲ್ಲಿ ಸಕಾಲ ಪ್ರತಿ ಕೌಂಟರ್‌ಗಳಲ್ಲಿ ನೀಡುವ ಸೇವೆಗಳನ್ನು ಹಾಗೂ ಆ ಸೇವೆಯನ್ನು ಎಷ್ಟು ದಿನಗಳಲ್ಲಿ ನೀಡಲಾಗುವುದು ಎನ್ನುವುದನ್ನು ನಮೂದಿಸಬೇಕು. ನಿಗದಿತ ದಿನಗಳಲ್ಲಿ ಸಕಾಲ ಸೇವೆ ನೀಡದಿದ್ದಲ್ಲಿ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ. ಡಿಸ್‌ಪ್ಲೇ ಜೊತೆಗೆ ಸೂಚನಾ ಫಲಕವನ್ನು ಹಾಕಬೇಕು ಎಂದು ತಿಳಿಸಿದರು.

ಸಕಾಲ ಸಾರ್ವಜನಿಕರಿಗೆ ವರದಾನವಾಗಿದೆ. ಸಾರ್ವಜನಿಕರು ಸಕಾಲದಲ್ಲಿನ ಸೇವೆಗಳನ್ನು ಬಳಸಿಕೊಂಡಷ್ಟು ಸಕಾಲ ಮತ್ತಷ್ಟು ಸೇವೆಗಳನ್ನು ನೀಡಲು ಮುಂದಾಗುತ್ತದೆ. ಸಕಾಲ ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದೆ. ಗೂಗಲ್ ಸಂಸ್ಥೆ ಕೂಡ ಸಕಾಲಕ್ಕೆ ಪ್ರಶಸ್ತಿ ನೀಡಿ, ಹಾಡಿ ಹೊಗಳಿದೆ ಎಂದು ಸಕಾಲ ಕಾರ್ಯವೈಖರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಸಕಾಲ ಯೋಜನೆ ಜಾರಿಗೆ ಬಂದು 6 ವರ್ಷಗಳು ಕಳೆಯಿತು. ರಾಜ್ಯದಲ್ಲಿ 20 ಸಾವಿರ ಸಕಾಲದ ಕಚೇರಿಗಳಿವೆ. ಇಲ್ಲಿಯವರೆಗೆ ಸುಮಾರು 16ರಿಂದ 18 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸಕಾಲವನ್ನು ಯೋಜನೆಯ ಕಾರ್ಯವೈಖರಿಯನ್ನು ಸರಿಯಾಗಿ ಪರಿಶೀಲಿಸಿ, ಮತ್ತಷ್ಟು ಅಂಶಗಳನ್ನು ಸೇರ್ಪಡೆಗೊಳಿಸಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ದೇಶದಲ್ಲಿಯೇ ರಾಜ್ಯದ ಸಕಾಲ ಯೋಜನೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಮಾದರಿಯಾಗಿದೆ. ಬಾಂಗ್ಲಾದೇಶದಲ್ಲೂ ಕರ್ನಾಟಕ ಮಾದರಿಯ ಸಕಾಲವನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಹಾಗಾಗಿ ತಮ್ಮ ಅಧಿಕಾರಿಗಳು ಬಾಂಗ್ಲಾದೇಶದ ಅಧಿಕಾರಿಗಳಿಗೆ ಕಾರ್ಯಾ ಗಾರ ಹಮ್ಮಿಕೊಂಡು ತರಬೇತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಕಾಲದಲ್ಲಿ ಸೊರೆಯುವ ಸೇವಗಳನ್ನು ನಿಗದಿತ ಸಮಯದಲ್ಲಿ ನೀಡಲಾಗುವುದು. ಅಧಿಕಾರಿಗಳು ಸಕಾಲದಲ್ಲಿ ಸೇವೆ ನೀಡಲು ವಿಳಂಬಗತಿ ತೋರಿ ಸಿರುವುದು ಗಮನಕ್ಕೆ ಬಂದರೆ ಸಂತ್ರಸ್ತರು ಮೇಲಧಿಕಾರಿಗಳಿಗೆ ದೂರು ನೀಡಬೇಕು. ದೂರನ್ನು ಪರಿಶೀಲಿಸಿ, ಯಾವ ಅಧಿಕಾರಿಗಳ ಕಾರ್ಯಲೋಪ ಅಥವಾ ವಿಳಂಬಗತಿಗೆ ಕಾರಣವಾದ ಅಧಿಕಾರಿಗಳಿಗೆ ಪ್ರತಿದಿನದಂತೆ 20 ರೂ. ದಂಡ ಹಾಕಲು ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸಕಾಲ ಯೋಜನೆ ಆರಂಭವಾದ ಎರಡು-ಮೂರು ವರ್ಷಗಳ ಕಾಲ ಸಮರ್ಪಕವಾಗಿ ಸೇವೆ ನೀಡುವಲ್ಲಿ ಯಶಸ್ವಿಯಾಯಿತು. ಆದರೆ ಕಳೆದ ಒಂದೂವರೆ ವರ್ಷದಿಂದ ವಿಳಂಬಗತಿ ಅನುಸರಿಸುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ತಮ್ಮ ಗಮನಕ್ಕೆ ಬಂದಂತಹ ದೂರು ಗಳನ್ನು ಸರಕಾರಕ್ಕೆ ವರದಿ ಮಾಡಿದ್ದೇನೆ. ಕೆಲವರಿಗೆ ನೋಟಿಸ್‌ನ್ನು ಜಾರಿ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಕೂಡ ಸಕಾಲ ಸೇವೆ ದೊರಕಿಸಿಕೊಡು ವಲ್ಲಿ ವಿಫಲರಾಗಿದ್ದರು. ಅವರಿಂದಲೂ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ಸಕಾಲ ಯೋಜನೆಯಲ್ಲೂ ಇ-ಆಡಳಿತವನ್ನು ಕಲ್ಪಿಸಲಾಗಿದ್ದು, ಬೆಂಗಳೂರಿನ ಬಿಬಿಎಂಪಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಅದು ಯಶಸ್ವಿಯಾ ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸುವ ಚಿಂತನೆ ಮಾಡಲಾಗಿದೆ. ಇದರಲ್ಲಿ ಸೇವೆ ಪಡೆಯಲು ಆನ್‌ಲೈನ್‌ನಲ್ಲಿಯೇ ಹಣ ಪಾವತಿಸಿ, ಸೇವೆಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಗರೋತ್ತಾನ ಯೋಜನಾಧಿಕಾರಿ ಪ್ರಸನ್ನ, ಜಿಲ್ಲ ಸಕಾಲ ಐಟಿ ಸಲಹೆಗಾರ್ತಿ ಮಾಲತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

‘ಸಕಾಲ: ಭವಿಷ್ಯದಲ್ಲಿ 1000ಕ್ಕೂ ಹೆಚ್ಚು ಸೇವೆ ಲಭ್ಯ’

ಸದ್ಯ ಕರ್ನಾಟಕದ ಸಕಾಲದಲ್ಲಿ 897 ಸೇವೆಗಳು ಲಭ್ಯಯಿವೆ. ಆದರೆ ಯೋಜನೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಇನ್ನು ಹಲವು ಸೇವೆಗಳನ್ನು ಸೇರ್ಪಡಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಸೇವೆಗಳನ್ನು ಸಕಾಲದಲ್ಲಿ ಲಭ್ಯವಾಗಲಿದೆ. ಇದರಿಂದ ಸಾರ್ವಜನಿಕರಿಗೆ ಸುಲಭವಾಗಿ ಸೇವೆಗಳನ್ನು ದೊರೆಯಲಿವೆ ಎಂದು ಕರ್ನಾಟಕ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಮಥಾಯಿ ತಿಳಿಸಿದರು.

ಸಕಾಲ: ಕಾಲ್ ಸೆಂಟರ್ 

ರಾಜ್ಯದ ಆಯಾ ಜಿಲ್ಲೆಯಲ್ಲಿ ಸಕಾಲಕ್ಕೆ ಸಂಬಂಧಿಸಿದ ಸಮಸ್ಯೆ, ಸಲಹೆ, ಸೂಚನೆಗಳನ್ನು ನೀಡಲು ಐಟಿ ಸಲಹೆಗಾರರು ಇರುತ್ತಾರೆ. ಸಾರ್ವಜನಿಕರು ಸಂಪರ್ಕಿಸಿ, ಸಲಹೆ ಸೂಚನೆ ಪಡೆಯಬಹುದು. ಅಲ್ಲದೆ, ಸಾರ್ವಜನಿಕರು ನೇರವಾಗಿ ಸಕಾಲ ಕಾಲ್ ಸೆಂಟರ್(080- 44554455)ನ್ನು ಸಂಪರ್ಕಿಸಿ ದೂರು-ದುಮ್ಮಾನ, ಸಲಹೆ-ಸೂಚನೆ ಪಡೆಯಬಹುದು. ಸಂತ್ರಸ್ತರು ಕರೆ ಮಾಡಿದಾಗ ಸ್ವೀಕರಿಸುವ ಕಾಲ್ ಸೆಂಟರ್‌ನವರು ಆಯಾ ಜಿಲ್ಲೆಯ ಅಧಿಕಾರಿಗಳ ಜೊತೆ ಕಾನ್ಫರೆನ್ಸ್ ಕಾಲ್ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗರಹರಿಸಲಾಗುತ್ತದೆ ಎಂದು ಕರ್ನಾಟಕ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಮಥಾಯಿ ಮಾಹಿತಿ ನೀಡಿದರು.

‘ಸಕಾಲ’ ಅಧಿಕಾರ ಬರುವ ದಿನವೇ ಹೊಸ ಬೋರ್ಡ್ !

ಮಂಗಳೂರು ನಗರದಲ್ಲಿನ ಒಂದೇಒಂದು ಕಚೇರಿಯಲ್ಲೂ ಸಕಾಲದ ಬೋರ್ಡ್‌ಗಳನ್ನು ಹಾಕಲಾಗಿಲ್ಲ. ಇಲ್ಲಿ ಸಕಾಲವೇ ಕೆಲಸ ಮಾಡುತ್ತಿಲ್ಲ. ದ.ಕ. ಜಿಲ್ಲೆ ಯಲ್ಲಿ ಸಕಾಲ ಶೇ.99ರಷ್ಟು ಫೇಲ್ ಆಗಿದೆ. ಸಕಾಲ ಮಿಷನ್ ಅಧಿಕಾರಿಗಳು ಜಿಲ್ಲೆಗೆ ಭೇಟಿ ದಿನವೇ ಡಿಸಿ ಕಚೇರಿಯಲ್ಲಿ ಹೊಸ ಬೋರ್ಡ್‌ನ್ನು ಹಾಕಲಾಗಿದೆ. ಮನಪಾದಲ್ಲಿ ಉದ್ದಿಮೆಯ ಪ್ರಮಾಣಪತ್ರ ಸಿಗುತ್ತದೆಯೇ ವಿನಃ ಸಕಳಾದ ಸೇವೆಗಳು ದೊರೆಯುವುದು ದುಸ್ಥರ ಎಂದು ಸಮಾಜ ಸೇವಕ ಹನುಮಂತ ಕಾಮತ್ ಸಕಾಲ ಮಿಷನ್ ಅಧಿಕಾರಿಯಲ್ಲಿ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಮಥಾಯಿ, ಹೌದು. ತಾನು ಬಂದ ದಿನವೇ ಡಿಸಿ ಕಚೇರಿಯಲ್ಲಿ ಹೊಸ ಬೋರ್ಡ್‌ನ್ನು ಹಾಕಿರುವುದು ತನ್ನ ಗಮನಕ್ಕೆ ಬಂದಿದೆ. ಇನ್ನು ಕೆಲವೆಡೆ ಬೋರ್ಡ್‌ಗಳನ್ನು ಹಾಕಲು ಪ್ರಯತ್ನಿಸಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮತ್ತೆ ದ.ಕ. ಜಿಲ್ಲೆಗೆ ತಾನು ಭೇಟಿ ನೀಡಲಿದ್ದೇನೆ. ಜಿಲ್ಲೆಯಲ್ಲಿ ಅಧಿಕಾರಿಗಳಿಂದ ಆಡಳಿತಾತ್ಮಕ ಬದಲಾವಣೆ ನಿರೀಕ್ಷಿಸಿರುವುದಾಗಿ ಅವರು ತಿಳಿಸಿದರು.

‘ದಂಡವನ್ನು ಕನಿಷ್ಠ 500ಕ್ಕೆ ಪರಿಷ್ಕರಿಸಿ’

ಸಕಾಲ ಸೇವೆಯನ್ನು ನೀಡುವಲ್ಲಿ ವಿಫಲರಾದ ಅಧಿಕಾರಿಗಳಿಂದ ದಂಡ ವಸೂಲಿ ಮಾಡುವ ಮೊತ್ತವು ತುಂಬ ಕಡಿಮೆ ಪ್ರಮಾಣದಲ್ಲಿದೆ. ಬಸ್‌ನಲ್ಲಿ ತಿರುಗಾಡಲು 20ರೂ.ಗಿಂತ ಹೆಚ್ಚು ಪಾವತಿಸಲಬೇಕಾಗುತ್ತದೆ. ಸದ್ಯ ಇರುವ 20 ರೂ. ದಂಡವನ್ನು ಕನಿಷ್ಠ 500 ರೂ.ಗೆ ಪರಿಷ್ಕರಿಸಬೇಕು ಎಂದು ಸಮಾಜ ಸೇವಕ ಜಿ.ಕೆ.ಭಟ್ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಮಥಾಯಿ, ಸಲಹೆ ಸ್ವಾಗತಾರ್ಹವಾಗಿದೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News