42 ಕೋಟಿ ರೂ. ಸಾಲಕ್ಕಾಗಿ ಸೊಸೈಟಿಯ ಜಮೀನನ್ನು ಸದಸ್ಯರಿಗೆ ತಿಳಿಸದೆ ಅಡವಿಟ್ಟ ಗಡ್ಕರಿ

Update: 2018-10-16 16:14 GMT

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಾನು ಪ್ರವರ್ತಕನಾಗಿರುವ ನಾಗ್ಪುರದ ಸಹಕಾರಿ ಸಂಘಕ್ಕೆ ಸೇರಿದ ಜಮೀನನ್ನು ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಬ್ಯಾಂಕಿಗೆ ಅಡಮಾನವಿರಿಸಿ 42.83 ಕೋ.ರೂ.ಸಾಲ ಪಡೆದುಕೊಳ್ಳಲು ತನ್ನ ಪುತ್ರರಿಗೆ ನೆರವಾಗಿದ್ದಾರೆ ಎಂದು ಬಿಜೆಪಿಯ ಮಾತೃ ಸಂಘಟನೆ ಆರೆಸ್ಸೆಸ್‌ನ ಸದಸ್ಯರೇ ಆರೋಪಿಸಿದ್ದಾರೆ.

 ಗಡ್ಕರಿಯವರ ಪುತ್ರರಾದ ನಿಖಿಲ್ ಗಡ್ಕರಿ ಮತ್ತು ಸಾರಂಗ್ ಗಡ್ಕರಿ ಅವರ ಒಡೆತನದ ಜಿಎಂಟಿ ಮೈನಿಂಗ್ ಆ್ಯಂಡ್ ಪವರ್ ಲಿ.ಈ ಸಾಲವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಪೊಲಿಸ್ಯಾಕ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ(ಪಿಸಿಎಸ್‌ಎಲ್)ಗೆ ಸೇರಿದ ಜಮೀನನ್ನು ಪರಭಾರೆ ಮಾಡಲಾಗಿದೆ. ಪಿಸಿಎಸ್‌ಎಲ್‌ನ ಶೇರುದಾರ ಮತ್ತು ಆರೆಸ್ಸೆಸ್ ಸದಸ್ಯ ಘನಶ್ಯಾಮದಾಸ ರಥಿ ಅವರು ನಾಗ್ಪುರದಲ್ಲಿರುವ ಮಹಾರಾಷ್ಟ್ರ ಕೈಗಾರಿಕಾಭಿವೃದ್ಧಿ ನಿಗಮ(ಎಂಐಡಿಸಿ)ದ ಕಚೇರಿಗೆ ತೆರಳಿ,ಈ ಜಮೀನನ್ನು ಗಡ್ಕರಿಯವರ ಭಾವ ಕಿಶೋರ ತೋತ್ಡೆ ಅವರು ನಿರ್ದೇಶಕರಾಗಿರುವ ಪುರ್ತಿ ಸೋಲಾರ ಸಿಸ್ಟಮ್ಸ್ ಲಿ.ಕಂಪನಿಯು ತನ್ನ ವಶಕ್ಕೆ ಪಡೆದುಕೊಂಡಿರುವುದನ್ನು ಪತ್ತೆ ಹಚ್ಚಿದ ಬಳಿಕ ಮೊದಲ ಬಾರಿಗೆ ಈ ವಂಚನೆಯು ಬೆಳಕಿಗೆ ಬಂದಿದೆ. ಜಿಎಂಟಿ ಕಂಪನಿಗೆ ಕೋಟ್ಯಂತರ ರೂ.ಗಳ ಸಾಲವನ್ನು ದೊರಕಿಸಲು ಪಿಸಿಎಸ್‌ಎಲ್‌ಗೆ ಸೇರಿದ ಈ ಜಮೀನನ್ನು ಸಾರಸ್ವತ ಬ್ಯಾಂಕಿಗೆ ಅಡಮಾನ ಮಾಡಿರುವುದು ಹೆಚ್ಚಿನ ವಿಚಾರಣೆಯಿಂದ ಬಹಿರಂಗಗೊಂಡಿದೆ.

ಪ್ರಶ್ನಾರ್ಹ ವ್ಯವಹಾರಗಳಲ್ಲಿ ಗಡ್ಕರಿಯವರ ಹೆಸರು ಕೇಳಿಬಂದಿರುವುದು ಇದೇ ಮೊದಲಲ್ಲ. ಸರಕಾರಿ ಸ್ವಾಮ್ಯದ ಇಂಡಿಯನ್ ರಿನ್ಯೂಯೇಬಲ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ ಲಿ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಗಡ್ಕರಿಯವರು ಪ್ರವರ್ತಕ ಮತ್ತು ನಿರ್ದೇಶಕರಾಗಿರುವ ಪುರ್ತಿ ಸಕ್ಕರೆ ಕಾರ್ಖಾನೆಗೆ 48.65 ಕೋ.ರೂ.ಸಾಲವನ್ನು ನೀಡಿದೆ ಎಂದು 2015ರಲ್ಲಿ ಸಿಎಜಿ ವರದಿಯಲ್ಲಿ ಆರೋಪಿಸಲಾಗಿತ್ತು.

  ಪಿಸಿಎಸ್‌ಎಲ್ ಪಿವಿಸಿ ಪೈಪ್‌ಗಳ ತಯಾರಿಕೆಗಾಗಿ ಗಡ್ಕರಿಯವರ ಪ್ರವರ್ತನೆಯಲ್ಲಿ 1988ರಲ್ಲಿ ಸ್ಥಾಪನೆಗೊಂಡ ಸಹಕಾರಿ ಸಂಘವಾಗಿದ್ದು,ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರು ಅದನ್ನು ಉದ್ಘಾಟಿಸಿದ್ದರು. ಎಂಐಡಿಸಿಯು ನಾಗ್ಪುರದ ಹಿಂಗಾನ ಕೈಗಾರಿಕಾ ಪ್ರದೇಶದಲ್ಲಿ 99,000 ರೂ.ಗಳ ಪ್ರೀಮಿಯಮ್‌ನಲ್ಲಿ ವಾರ್ಷಿಕ ಒಂದು ರೂಪಾಯಿ ಬಾಡಿಗೆಯ ಆಧಾರದಲ್ಲಿ 4,950 ಚ.ಮೀ.ಜಾಗವನ್ನು ಪಿಸಿಎಸ್‌ಎಲ್‌ಗೆ ನೀಡಿತ್ತು. ಮಹಾರಾಷ್ಟ್ರ ಸರಕಾರವು ಈ ಸಂಘಕ್ಕೆ 24.77 ಲ.ರೂ.ಗಳ ಅನುದಾನವನ್ನೂ ನೀಡಿತ್ತು. ಗಡ್ಕರಿ ಮತ್ತು ಅವರ ಸಂಬಂಧಿಗಳು ಸೇರಿಕೊಂಡು ಜಿಎಂಟಿಗೆ ಸಾಲವನ್ನು ದೊರಕಿಸಲು ಇದೇ ಜಾಗವನ್ನು ವರ್ಗಾಯಿಸಿದ್ದರು. ಈ ವಂಚನೆ ಹಗರಣವನ್ನು ವರದಿ ಮಾಡಿರುವ ಸುದ್ದಿ ಜಾಲತಾಣ ‘ನ್ಯೂಸ್ ಲಾಂಡ್ರಿ’ಗೆ ಈ ಬಗ್ಗೆ ದಾಖಲೆಗಳು ಲಭ್ಯವಾಗಿವೆ.

ಪಿಸಿಎಸ್‌ಎಲ್ ಕಾರ್ಯಾಚರಣೆ 2003ರಲ್ಲಿ ಸ್ಥಗಿತಗೊಂಡಿದ್ದು,ಆ ಬಳಿಕ ಅದು ತನ್ನ ಶೇರುದಾರರ ಸಭೆಯನ್ನು ಒಮ್ಮೆಯೂ ಕರೆದಿರಲಿಲ್ಲ ಮತ್ತು ಜಾಗದ ವರ್ಗಾವಣೆಯ ಬಗ್ಗೆ ಅವರಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

 ಗಡ್ಕರಿ ಮತ್ತು ಅವರ ಸಂಬಂಧಿಗಳು ಸೇರಿಕೊಂಡು 1,330 ಶೇರುದಾರರನ್ನು ವಂಚಿಸಿದ್ದಾರೆ. ಅವರಿಗೆ ಯಾವುದೇ ಮಾಹಿತಿ ನೀಡದೆ ಪಿಸಿಎಸ್‌ಎಲ್‌ನ ಜಾಗವನ್ನು ಪುರ್ತಿ ಸೋಲಾರ್ ಸಿಸ್ಟಮ್ಸ್‌ಗೆ ವರ್ಗಾಯಿಸಿದ್ದಾರೆ. ಆ ಬಳಿಕ ಜಿಎಮ್‌ಟಿ ಮೈನಿಂಗ್ ಆ್ಯಂಡ್ ಪವರ್ ಪ್ರೈ.ಲಿ.ಕಂಪನಿಯು ಪುರ್ತಿ ಸೋಲಾರ್‌ನ ಸೋದರ ಕಂಪನಿ ಎಂದು ಹೇಳಿಕೊಂಡು ಅದಕ್ಕೆ 42.83 ಕೋ.ರೂ.ಸಾಲ ಕೊಡಿಸಲು ಜಾಗವನ್ನು ಹಿಂಗಾನದ ಸಾರಸ್ವತ ಬ್ಯಾಂಕಿಗೆ ಅಡಮಾನ ಮಾಡಿದ್ದಾರೆ ಎಂದು ಹೇಳಿದ ಕಟ್ಟಾ ಆರೆಸ್ಸೆಸ್ಸಿಗ ಹಾಗೂ ಪಿಸಿಎಸ್‌ಎಲ್‌ನ ಪ್ರಥಮ ಸದಸ್ಯ ರಥಿ,ಜಾಗದ ವರ್ಗಾವಣೆಯ ಬಗ್ಗೆ ಸಹಕಾರಿ ಸಂಘಗಳ ನಿಬಂಧಕರಿಗೂ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ, ಅವರ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ. ಜಾಗದ ಅಡಮಾನದ ಬಗ್ಗೆ ಸಹಕಾರ ಇಲಾಖೆಗೂ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಇದು ತಮ್ಮ ಕಂಪನಿಗಳ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಗಡ್ಕರಿ ಮತ್ತು ಅವರ ಬಂಧುಗಳು ನಡೆಸಿರುವ ಷಡ್ಯಂತ್ರವಾಗಿದೆ. ಜಾಗವನ್ನು ಕಬಳಿಸಲು ಗಡ್ಕರಿ,ಅವರ ಇಬ್ಬರು ಪುತ್ರರು ಮತ್ತು ತೋತ್ಡೆ ಮೊದಲೇ ಸಂಚು ರೂಪಿಸಿದ್ದರು. ಹಿಂಗನಾದ ಜಾಗವನ್ನು ಅಡಮಾನವಿರಿಸುವುದನ್ನು ಉಲ್ಲೇಖಿಸಿ ಅವರು ಪುರ್ತಿ ಸೋಲಾರ್‌ನ ಸಭೆಯಲ್ಲಿ 2011ರಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದರು. ಆದರೆ ಪಿಸಿಎಸ್‌ಎಲ್ ಒಡೆತನದ ಜಾಗವನ್ನು ಪುರ್ತಿ ಸೋಲಾರ್‌ಗೆ ವರ್ಗಾಯಿಸಲು ಮೊದಲ ಅರ್ಜಿ ಎಂಐಡಿಸಿಯ ಪ್ರಾದೇಶಿಕ ಕಚೇರಿಗೆ 2012ರಲ್ಲಷ್ಟೇ ಸಲ್ಲಿಕೆಯಾಗಿತ್ತು. ಅಂದರೆ ಜಾಗವು ವರ್ಗಾವಣೆಗೊಳ್ಳುವುದಕ್ಕೆ ಮುನ್ನವೇ ಅದನ್ನು ಅಡಮಾನವಿರಿಸಲಾಗಿತ್ತು. ಇದರಿಂದ ಗಡ್ಕರಿ ಮತ್ತು ಕಂಪನಿಯ ಉದ್ದೇಶವೇನಾಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ನಿರ್ಧರಿಸಬಹುದು ಎಂದು ಪಿಸಿಎಸ್‌ಎಲ್‌ನ ಇನ್ನೋರ್ವ ಶೇರುದಾರ ಅಜಯ ಮಹಾಜನ್ ಹೇಳಿದ್ದಾರೆ.

ಶೇರುದಾರರು 2016,ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಆರ್‌ಟಿಐ ಅಡಿ ಜಾಗದ ವ್ಯವಹಾರದ ವಿವರಗಳನ್ನು ತಿಳಿದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದರು. ಇದು ಪಿಸಿಎಸ್‌ಎಲ್‌ನ ಸೆಕ್ರೆಟರಿ ರಾಜೇಶ ಬಾಗ್ಡಿಗೆ ಗೊತ್ತಾದಾಗ ಅವರು ಪುರ್ತಿ ಸೋಲಾರ್‌ಗೆ ಜಾಗದ ಮಾರಾಟವನ್ನು ಸಮರ್ಥಿಸಿಕೊಳ್ಳಲು ಹಿಂದಿನ ದಿನಾಂಕವನ್ನು ಹಾಕಿ ಆಡಿಟ್ ವರದಿಯನ್ನು ತಯಾರಿಸಿದ್ದರು. ಇದನ್ನು ಕ್ರಮಬದ್ಧಗೊಳಿಸಲು ಡೆಪ್ಯೂಟಿ ರಿಜಿಸ್ಟ್ರಾರ್ ಕಚೇರಿಯಲ್ಲಿನ ಟಪಾಲು ಪುಸ್ತಕದಲ್ಲಿನ ದಿನಾಂಕಗಳನ್ನು ತಿದ್ದಲಾಗಿತ್ತು ಎಂದು ಮಹಾಜನ್ ತಿಳಿಸಿದ್ದಾರೆ.

ರಥಿ ಮತ್ತು ಮಹಾಜನ್ ಈ ವರ್ಷದ ಆಗಸ್ಟ್ ನಲ್ಲಿ ನಾಗ್ಪುರ ಜಿಲ್ಲಾ ನ್ಯಾಯಾಲಯದಲ್ಲಿ ಗಡ್ಕರಿ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಜಾಗದ ಪರಭಾರೆ-ಅಡಮಾನಕ್ಕೆ ಸಂಬಂಧಿಸಿದಂತೆ ಈ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದೂ ಕೋರಿಕೊಂಡಿದ್ದಾರೆ.

ಜಾಗವು ಪಿಸಿಎಸ್‌ಸಿಲ್‌ನಿಂದ ಪುರ್ತಿ ಸೋಲಾರ್‌ಗೆ ವರ್ಗಾವಣೆಗೊಂಡಿದ್ದರೂ, ಅದನ್ನು ವರ್ಗಾಯಿಸಲಾದ ಉದ್ದೇಶಕ್ಕಾಗಿ ಬಳಸಿಕೊಂಡಿಲ್ಲ. ಈ ಜಾಗದಲ್ಲಿ ಪುರ್ತಿ ಸೋಲಾರ್ ಸೌರಫಲಕಗಳು ಮತ್ತು ಪಂಪ್‌ಗಳು ಹಾಗೂ ಸೋಲಾರ್ ಎಲ್‌ಇಡಿ ಬಲ್ಬ್‌ಗಳ ತಯಾರಿಕೆ ಘಟಕವನ್ನು ಸ್ಥಾಪಿಸುತ್ತದೆ ಎಂದು ಎಂಐಡಿಸಿಗೆ ತಿಳಿಸಲಾಗಿತ್ತಾದರೂ ಅದಕ್ಕೆ ಬಳಸದೆ ಜಿಎಂಟಿ ಸಾಲ ಪಡೆಯಲು ಬ್ಯಾಂಕಿಗೆ ಅಡಮಾನವಿರಿಸಲಾಗಿದೆ. ಜಿಎಂಟಿ ಈ ಹಣವನ್ನು ನಾಗ್ಪುರದ ಕುಹಿ ತಾಲೂಕಿನಲ್ಲಿ 10 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಸ್ಥಾವರದ ಸ್ಥಾಪನೆಗೆ ಬಳಸುತ್ತಿದೆ.

ಡಿಸೆಂಬರ್,2017ರಲ್ಲಿ ರಥಿ ನಾಗ್ಪುರ್ ಡಿಸಿಪಿ(ಆರ್ಥಿಕ ಅಪರಾಧಗಳ ವಿಭಾಗ)ಗೆ ದೂರು ಸಲ್ಲಿಸಿ,ಪಿಸಿಎಸ್‌ಎಲ್‌ನ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿಕೊಂಡಿದ್ದರು. ಈ ವಿಷಯದಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳ್ಳುವಂತೆ ಕೋರಿ ಡಿಸಿಪಿ ಈ ದೂರನ್ನು ಜಿಲ್ಲಾ ಡೆಪ್ಯೂಟಿ ರಿಜಿಸ್ಟ್ರಾರರ ಕಚೇರಿಗೆ ಕಳುಹಿಸಿದ್ದರು.

‘‘ಗಡ್ಕರಿ ಮತ್ತು ಅವರ ಗ್ಯಾಂಗ್ 2003ರ ಬಳಿಕ ಪಿಸಿಎಸ್‌ಎಲ್‌ನ ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆದಿಲ್ಲ ಮತ್ತು ತಮ್ಮ ಲಾಭಕ್ಕಾಗಿ ಶೇರುದಾರರ ಅನುಮತಿಯನ್ನು ಪಡೆದುಕೊಳ್ಳದೆ ಜಾಗವನ್ನು ಪುರ್ತಿ ಸೋಲಾರ್‌ಗೆ ವರ್ಗಾಯಿಸಿದ್ದಾರೆ. ನಾನು ಈ ಬಗ್ಗೆ ಸಹಕಾರಿ ಸಂಘಗಳ ಡೆಪ್ಯೂಟಿ ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಿದ್ದೇನೆ. ಗಡ್ಕರಿ ಪ್ರಭಾವಿ ವ್ಯಕ್ತಿ ಎನ್ನುವುದು ನನಗೆ ಗೊತ್ತು,ಆದರೆ ಅವರು ನಮಗೆ ಮಾಡಿರುವ ವಂಚನೆಯಿಂದ ಪಾರಾಗಲು ನಾವು ಬಿಡುವುದಿಲ್ಲ’’ ಎಂದು ಪಿಸಿಎಸ್‌ಎಲ್‌ನ ಇನ್ನೋರ್ವ ಶೇರುದಾರ ಅನಿಲ್ ಲಂಬಾಡೆ ಹೇಳಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರೂ ಪಿಸಿಎಸ್‌ಎಲ್‌ನ ಸದಸ್ಯರಾಗಿದ್ದು,ಅವರನ್ನು ಸಂಪರ್ಕಿಸುವ ನ್ಯೂಸ್‌ಲಾಂಡ್ರಿ ಪ್ರಯತ್ನ ವಿಫಲಗೊಂಡಿದೆ.

ಆದರೆ ಸಂಪರ್ಕಕ್ಕೆ ಲಭ್ಯರಾದ ಫಡ್ನವೀಸ್‌ರ ಸೋದರ ಆಶಿಷ್ ಫಡ್ನವೀಸ್ ಅವರು, ‘‘ಜಾಗದ ವರ್ಗಾವಣೆಯ ಬಗ್ಗೆ ನಮಗೆ ತಿಳಿದಿತ್ತು,ಆದರೆ ಅದಕ್ಕೆ ಸಂಬಂಧಿಸಿದಂತೆ ಸಹಕಾರಿ ಸಂಘದ ಅನುಮತಿ ಪಡೆಯಬೇಕು ಎಂಬಂತಹ ಕಾನೂನು ವಿಷಯಗಳು ನಮಗೆ ಗೊತ್ತಿರಲಿಲ್ಲ. ಇವೆಲ್ಲ ಕಾನೂನಿನ ಜಟಿಲತೆಗಳಾಗಿದ್ದು,ಜನರು ಪ್ರಕರಣದ ಆಳಕ್ಕೆ ಇಳಿಯುತ್ತಿರುವಂತೆ ಹೊಸಹೊಸ ವಿಷಯಗಳು ಬೆಳಕಿಗೆ ಬರಬಹುದು. ಆದರೆ ಇಂತಹ ಯಾವುದೇ ವಿಷಯವಿರಬಹುದು ಎಂದು ನಾನು ಭಾವಿಸಿಲ್ಲ’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News