ಇಂದು ಮುಂಬೈ-ಹೈದರಾಬಾದ್ ಸೆಮಿ ಫೈನಲ್ ಪಂದ್ಯ

Update: 2018-10-16 18:25 GMT

ಬೆಂಗಳೂರು, ಅ.16: ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡ ಮುಂಬೈ ತಂಡ ಬುಧವಾರ ಇಲ್ಲಿ ನಡೆಯಲಿರುವ ವಿಜಯ್ ಹಝಾರೆ ಟ್ರೋಫಿಯ ಮೊದಲ ಸೆಮಿ ಫೈನಲ್‌ನಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಹೈದರಾಬಾದ್‌ನಲ್ಲಿ ಕೊನೆಗೊಂಡ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಶಾ ಹಾಗೂ ರಹಾನೆ ಸೇರ್ಪಡೆ, ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ ಉಪಸ್ಥಿತಿಯಲ್ಲಿ ಮುಂಬೈ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಅಂಬಟಿ ರಾಯುಡು ಹಾಗೂ ಯುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರನ್ನೊಳಗೊಂಡ ಆಂಧ್ರ ತಂಡ ಈವರೆಗೆ ರಾಷ್ಟ್ರೀಯ ಏಕದಿನ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ಪೃಥ್ವಿ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್‌ರೊಂದಿಗೆ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಎಡಗೈ ಓಪನರ್ ಅಖಿಲ್ ಹೆರ್ವಾಡ್ಕರ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.

ರಹಾನೆ ಅವರು ಸಿದ್ದೇಶ್ ಲಾಡ್ ಅಥವಾ ಸೂರ್ಯಕುಮಾರ್ ಯಾದವ್ ಬದಲಿಗೆ ಆಯ್ಕೆಯಾಗುವ ನಿರೀಕ್ಷೆಯಿದೆ.

ಭಾರತ ತಂಡದ ಸದಸ್ಯರು ಮೊದಲ ಏಕದಿನ ನಡೆಯುವ ಗುವಾಹತಿಗೆ ಅ.18ರಂದು ತೆರಳಬೇಕಾಗಿದೆ. ಒಂದು ವೇಳೆ ಮುಂಬೈ ಟೂರ್ನಿಯ ಫೈನಲ್‌ಗೆ ತಲುಪಿದರೆ, ರೋಹಿತ್ ತಂಡದಲ್ಲಿ ಆಡುವುದಿಲ್ಲ. ಫೈನಲ್ ಪಂದ್ಯ ಅ.20 ರಂದು ನಡೆಯಲಿದೆ.

ಮುಂಬೈ ತಂಡದ ಪರ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಮೂವರು ಆಟಗಾರರೆಂದರೆ: ಶ್ರೇಯಸ್ ಅಯ್ಯರ್(311 ರನ್), ಪೃಥ್ವಿ(287) ಹಾಗೂ ಯಾದವ್(237 ರನ್). 230 ರನ್ ಗಳಿಸಿರುವ ರಹಾನೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಮುಂಬೈ ತಂಡದ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದು ವೇಗದ ಬೌಲರ್ ಧವಳ್ ಕುಲಕರ್ಣಿ(14 ವಿಕೆಟ್‌ಗಳು) ಹಾಗೂ ಲೆಗ್ ಸ್ಪಿನ್ನರ್ ಶಾಮ್ಸ್ ಮುಲಾನಿ(15 ವಿಕೆಟ್)ಒಟ್ಟು 29 ವಿಕೆಟ್ ಹಂಚಿಕೊಂಡಿದ್ದಾರೆ.

ಮಧ್ಯಮ ವೇಗದ ಬೌಲರ್ ತುಷಾರ್ ದೇಶಪಾಂಡೆ ಬಿಹಾರ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಕಬಳಿಸಿದ್ದರು.

ಹೈದರಾಬಾದ್‌ನ ಪರ ಬಿಪಿ ಸಂದೀಪ್(342 ರನ್) ಹಾಗ ತನ್ಮಯ್ ಅಗರ್ವಾಲ್(292 ರನ್)ಉತ್ತಮ ಸ್ಕೋರ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸಿರಾಜ್(6 ಪಂದ್ಯ, 8 ವಿಕೆಟ್) ಹಾಗೂ ಮೆಹಿದಿ ಹಸನ್(8 ಪಂದ್ಯಗಳು, 13 ವಿಕೆಟ್‌ಗಳು)21 ವಿಕೆಟ್ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News