ಮೊದಲೆರಡು ಏಕದಿನದಿಂದ ವಿಂಡೀಸ್ ಕೋಚ್ ಸ್ಟುವರ್ಟ್ ಲಾ ಅಮಾನತು

Update: 2018-10-16 18:29 GMT

ಹೊಸದಿಲ್ಲಿ, ಅ.16: ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗೆ 100 ಶೇ. ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್ ಪಡೆದಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಕೋಚ್ ಸ್ಟುವರ್ಟ್ ಲಾ ಭಾರತ ವಿರುದ್ಧ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಎರಡನೇ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಕಿರನ್ ಪೊವೆಲ್ ಔಟಾದ ಬೆನ್ನಿಗೇ ಟಿವಿ ಅಂಪೈರ್ ಕೊಠಡಿಗೆ ತೆರಳಿ ಅನುಚಿತವಾಗಿ ವರ್ತಿಸಿದ್ದರು. ಆನಂತರ ನಾಲ್ಕನೇ ಅಂಪೈರ್ ಬಳಿಗೂ ತೆರಳಿದ್ದರು. ಅಲ್ಲಿ ಎಲ್ಲ ಆಟಗಾರರ ಎದುರು ನಾಲ್ಕನೇ ಅಂಪೈರ್‌ರೊಂದಿಗೆ ಅಸಂಬದ್ಧವಾಗಿ ನಿಂದಿಸಿದ್ದರು.

2017ರ ಮೇನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್‌ನ ಕೊನೆಯ ದಿನ ಅನುಚಿತ ವರ್ತನೆ ತೋರಿದ್ದ ಸ್ಟುವರ್ಟ್ ಲಾಗೆ ಪಂದ್ಯಶುಲ್ಕದಲ್ಲಿ 25 ಶೇ. ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಹೈದರಾಬಾದ್ ಟೆಸ್ಟ್ ವೇಳೆ ತೋರಿದ್ದ ಅಸಭ್ಯ ವರ್ತನೆಗೆ 3 ಡಿಮೆರಿಟ್ ಅಂಕ ಪಡೆದಿರುವ ಲಾ ಒಟ್ಟು 4 ಡಿಮೆರಿಟ್ ಪಾಯಿಂಟ್ ಪಡೆದಿದ್ದಾರೆ.

ಲಾ ಅಕ್ಟೋಬರ್ 21 ಹಾಗೂ 24 ರಂದು ಭಾರತ ವಿರುದ್ಧ ಗುವಾಹತಿ ಹಾಗೂ ವಿಶಾಖಪಟ್ಟಣದಲ್ಲಿ ನಡೆಯುವ ಮೊದಲೆರಡು ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.

ಲಾ ಸೋಮವಾರ ಐಸಿಸಿ ಮ್ಯಾಚ್ ರೆಫರಿ ಅವರ ಶಿಕ್ಷೆಯನ್ನು ಒಪ್ಪಿಕೊಂಡಿದ್ದು ಅಧಿಕೃತ ವಿಚಾರಣೆ ನಡೆಯುವುದಿಲ್ಲ.

ಲಾ ವಿರುದ್ಧ ಆನ್‌ಫೀಲ್ಡ್ ಅಂಪೈರ್‌ಗಳಾದ ಬ್ರೂಸ್ ಆಕ್ಸ್‌ಫೋರ್ಡ್ ಹಾಗೂ ಇಯಾನ್ ಗೌಲ್ಡ್, ಮೂರನೇ ಅಂಪೈರ್ ನಿಗೆಲ್ ಲಾಂಗ್ ಹಾಗೂ ನಾಲ್ಕನೇ ಅಂಪೈರ್ ನಿತಿನ್ ಮೆನನ್ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News