ಮಂಗಳೂರು ದಸರಾ: ಅ.18ರಂದು ಕುದ್ರೋಳಿ ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಸನ್ಮಾನ

Update: 2018-10-17 08:52 GMT

ಮಂಗಳೂರು, ಅ.17: ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಸಲಾಗುವ ಮಂಗಳೂರು ದಸರಾ ಅಂಗವಾಗಿ ಅ.18ರಂದು 10 ಕ್ರೀಡಾ ಸಾಧಕರಿಗೆ ಸನ್ಮಾನ ಹಾಗೂ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕ್ಷೇತ್ರದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್, ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ ಪೂವಮ್ಮ, ಗುರುರಾಜ್, ಜಗದೀಶ್, ಪ್ರದೀಪ್ ಆಚಾರ್ಯ, ಪಂಚಮಿ ಸೇರಿದಂತೆ 10 ಮಂದಿಗೆ ಸನ್ಮಾನವನ್ನು ಅಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಗೋಕರ್ಣನಾಥ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಗುವುದು. ಈ ಕಾರ್ಡ್ ಪ್ರಥಮವಾಗಿ 2,000 ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು, ಚಿಕಿತ್ಸೆಗಾಗಿ ಎ,ಜೆ, ಆಸ್ಪತ್ರೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದೆ 10,000 ಕುಟುಂಬಗಳಿಗೆ ಈ ಪ್ರಯೋಜನವನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ದಸರಾ ಮೆರವಣಿಗೆಯಲ್ಲಿ 75ಕ್ಕೂ ಅಧಿಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ವೇಷ ಭೂಷಣಗಳು, ವಾದ್ಯಮೇಳ ತಂಡಗಳು ಭಾಗವಹಿಸಲಿವೆ. ಮೆರವಣಿಗೆ ಸುಸಾಂಗವಾಗಿ ನಡೆಯಲು ಪ್ರತಿಯೊಂದು ಟ್ಯಾಬ್ಲೋ ತಂಡಕ್ಕೆ ಒಬ್ಬರು ಎಎಸ್ಸೈ, 4 ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸುವುದಾಗಿ ಪೊಲೀಸ್ ಅಧಿಕಾರಿಗಳು ಭವರಸೆ ನೀಡಿದ್ದಾರೆ. ಪ್ರತಿ ತಂಡಕ್ಕೆ ಇಬ್ಬರು ಸಮನ್ವಯಕಾರರನ್ನು ನೇಮಕ ಮಾಡಲಾಗಿದೆ ಎಂದು ಪದ್ಮರಾಜ್ ತಿಳಿಸಿದರು.

ಸ್ತಬ್ಧಚಿತ್ರಗಳವರಿಗೆ ನಿಬಂಧನೆ

ಮಂಗಳೂರು ದಸರಾ ಮಹೋತ್ಸವ ಅ.19ರಂದು ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳಿಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ತಬ್ಧಚಿತ್ರಗಳ ಸಂಘಟಕರ ಸಭೆಯನ್ನು ಮಂಗಳವಾರ ಆಡಳಿತ ಮಂಡಳಿ ವತಿಯಿಂದ ನಡೆಸಲಾಗಿದೆ. ಟ್ಯಾಬ್ಲೋಗೆ ಸಂಬಂಧಿಸಿದ ಜನರೇಟರ್ ಹೊರತುಪಡಿಸಿ ತೆರೆದ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ವೇಷಧಾರಿಗಳು ವಾಹನದಿಂದ ಇಳಿದು ರಸ್ತೆಯಲ್ಲಿ ಪ್ರದರ್ಶನ ಮಾಡುವಂತಿಲ್ಲ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಸಂಘಟಕರು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ 16 ಗಂಟೆಗಳ ಮೆರವಣಿಗೆಯ ಅವಧಿಯನ್ನು ಈ ಬಾರಿ 12 ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ರವಿಶಂಕರ ಮಿಜಾರ್, ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ, ಉರ್ಮಿಳಾ ರಮೇಶ್, ಡಿ.ಡಿ. ಕಟ್ಟೆಮಾರ್, ಶೇಖರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಡಾ.ಅನಸೂಯಾ, ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News