ಕುದ್ರೋಳಿ ಕಸಾಯಿಖಾನೆ ಆಧುನೀಕರಿಸಲು ಸಿಪಿಎಂ ಒತ್ತಾಯ

Update: 2018-10-17 12:13 GMT

ಮಂಗಳೂರು, ಅ.17: ಸುಮಾರು 75 ವರ್ಷಗಳಿಗೂ ಹಳೆಯ ಕುದ್ರೋಳಿಯ ಕಸಾಯಿಖಾನೆಯನ್ನು ಆಧುನೀಕರಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.

ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನತೆಗೆ ಮಾಂಸಾಹಾರ ಒದಗಿಸುವಲ್ಲಿ ಕುದ್ರೋಳಿ ಕಸಾಯಿಖಾನೆ ಬಹುಮುಖ್ಯ ಪಾತ್ರವನ್ನು ದಶಕಗಳಿಂದಲೂ ವಹಿಸುತ್ತಾ ಬಂದಿದೆ. ಕಸಾಯಿಖಾನೆ ನಿರ್ವಹಣೆಯನ್ನು ಆಸಕ್ತ ಮಾಂಸೋದ್ಯಮಿಗಳಿಗೆ ಕಾಲಾವಧಿಯಲ್ಲಿ ಹರಾಜು ನಡೆಸುತ್ತಾ ಬರುತ್ತಿರುವುದರಿಂದ ಮನಪಾಗೆ ಒಂದೆಡೆಯಲ್ಲಿ ತೆರಿಗೆ ಲಭಿಸುತ್ತದೆ. ಇನ್ನೊಂದೆಡೆಯಲ್ಲಿ ಅಲ್ಲಿಂದ ಪಡಕೊಂಡ ಸಂಸ್ಕರಿತ ಆಡು, ಕುರಿ, ದನಗಳ ಮಾಂಸವನ್ನು ಪೂರೈಕೆ ಮಾಡುವ ಸಣ್ಣ ವ್ಯಾಪಾರಿಗಳು ನಗರದಾದ್ಯಂತ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗಿದೆ. ಬಹಳ ಕಾಲದಿಂದಲೂ ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಉದ್ಯಮಿಗಳು ಇದನ್ನು ವಹಿಸಿಕೊಳ್ಳುತ್ತಿದ್ದಾರೆ, ಹಾಗೂ ಎಲ್ಲ ಮತಗಳ ಮಾಂಸಾಪೇಕ್ಷಿ ನಾಗರಿಕರ ಬಯಕೆಯನ್ನು ತಣಿಸುತ್ತಿದ್ದಾರೆ. ಈ ಮಧ್ಯೆ ಕುದ್ರೋಳಿ ಕಸಾಯಿಖಾನೆಯನ್ನು ಮುಚ್ಚಬೇಕೆಂದು ಆಗ್ರಹಿಸಿ ಕೆಲವು ಕೋಮುವಾದಿ ಸಂಘಟನೆಗಳು ಆಗ್ರಹಿಸುತ್ತಾ ಬರುತ್ತಿವೆ. ಕಸಾಯಿಖಾನೆಯಲ್ಲಿ ಕೇವಲ ದನಗಳ ಮಾಂಸವನ್ನು ಮಾತ್ರ ಉತ್ಪಾದಿಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಮುಸ್ಲಿಂ ಸಮುದಾಯದ ವಿರುದ್ಧವಾಗಿ ಅವರನ್ನು ಗೋಹತ್ಯಾಕಾರರು ಹಾಗೂ ಭಯೋತ್ಪಾದಕರು ಎಂಬಂತೆ ನಿಂದಿಸಿ ಅಪಪ್ರಚಾರ ಮಾಡಿ ಕೋಮುದ್ವೇಷವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಸಿಪಿಎಂ ಹೇಳಿಕೆಯಲ್ಲಿ ತಿಳಿಸಿದೆ.

ಕುದ್ರೋಳಿ ಕಸಾಯಿಖಾನೆಯನ್ನು ಮುಚ್ಚಿದರೆ ಗೋಮಾಂಸ ಮಾತ್ರವಲ್ಲ ಆಡು ಕುರಿಗಳ ಆಹಾರವೂ ಇಲ್ಲವಾಗುತ್ತದೆಂಬ ಸತ್ಯ ದ್ವೇಷಪ್ರಚೋದಕರಿಗೆ ಗೊತ್ತಿಲ್ಲ. ಕೇಂದ್ರ ಸರಕಾರವು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರಿನ ಅಭಿವೃದ್ಧಿಗೆ ಹಲವು ಪ್ರಸ್ತಾವಕ್ಕೆ ಅವಕಾಶ ಮಾಡಿದೆ. ಅದರಲ್ಲಿ 15 ಕೋ.ರೂ. ವೆಚ್ಚದ ಆಧುನಿಕ ಕಸಾಯಿಖಾನೆಯೂ ಒಂದು. ಬಿಜೆಪಿ ಸದಸ್ಯರನ್ನೂ ಒಳಗೊಂಡ ಮನಪಾ ಅಂಥದೊಂದು ಪ್ರಸ್ತಾಪವನ್ನು ಅಂಗೀಕರಿಸಿದೆ. ಇದೀಗ ಬಿಜೆಪಿ ಪಕ್ಷದ ಬೆಂಬಲಿಗರೂ ಹಾಗೂ ಸಂಘಪರಿವಾರದ ಕೆಲ ಮುಖಂಡರೂ ಆಧುನಿಕ ಕಸಾಯಿಖಾನೆ ಮುಸ್ಲಿಮರ ತುಷ್ಟೀಕರಣದ ಯೋಜನೆ ಎಂಬಂತೆ ಆ ಬಗ್ಗೆ ವಿವರಗಳನ್ನು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಸಿಪಿಎಂ ತಿಳಿಸಿದೆ.

ಆಹಾರದ ಹಕ್ಕು ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದೆ. ಅವರಿಗೆ ಬೇಕಾದ ಆಹಾರವನ್ನು ಪಡೆಯಲು, ಯಾವ ಅಡೆತಡೆಗಳೂ ಇಲ್ಲದ ವ್ಯವಸ್ಥೆ ಹಾಗೂ ಸೌಕರ್ಯಗಳನ್ನು ಒದಗಿಸಿಕೊಡಬೇಕಾದುದು ಸ್ಥಳೀಯ ಸಂಸ್ಥೆಯ ಕರ್ತವ್ಯವಾಗಿದೆ. ಅದಕ್ಕಾಗಿ ಹೊಸ ಆಧುನೀಕೃತ ಕಸಾಯಿಖಾನೆ ನಿರ್ಮಾಣವಾಗಬೇಕು. ಅಲ್ಲಿಯವರೆಗೆ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು ಬಳಕೆಗೆ ಯೋಗ್ಯವಾಗುವಂತೆ ಆಧುನೀಕರಣಗೊಳಿಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News