​ನಷ್ಟದಾಯಕ ಬ್ಯಾಂಕುಗಳೊಂದಿಗೆ ವಿಜಯಾ ಬ್ಯಾಂಕ್ ವಿಲೀನಕ್ಕೆ ಸಿಪಿಎಂ ವಿರೋಧ

Update: 2018-10-17 12:17 GMT

ಮಂಗಳೂರು, ಅ.17: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರಕಾರವು ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸುವ ತಪ್ಪುಹಾದಿಯಲ್ಲಿ ನಡೆದಿದೆ. ಬ್ಯಾಂಕ್ ನೌಕರರ ವಿರೋಧದ ಮಧ್ಯೆ ಪ್ರಾದೇಶಿಕ ಸ್ಟೇಟ್‌ಬ್ಯಾಂಕುಗಳನ್ನು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಯಿತು. ಇದೀಗ ನಷ್ಟದಾಯಕವಾಗಿರುವ ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾಗಳೊಂದಿಗೆ ಲಾಭದಾಯಕವಾಗಿ ನಡೆಯುತ್ತಿರುವ ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಇನ್ನೊಂದು ತಪ್ಪುಹೆಜ್ಜೆಯನ್ನಿಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಸಿಪಿಎಂ ಆರೋಪಿಸಿದೆ.

ಬ್ಯಾಂಕಿಂಗ್ ರಂಗವನ್ನು ದೇಶದಲ್ಲೇ ಅತ್ಯಂತ ಯಶಸ್ವಿಗೊಳಿಸಿದ ಕೀರ್ತಿ ದ.ಕ. ಜಿಲ್ಲೆಯ ಬ್ಯಾಂಕುಗಳಿಗಿದೆ. ರಾಷ್ಟ್ರೀಕೃತಗೊಂಡ ಜಿಲ್ಲೆಯ 4 ಬ್ಯಾಂಕುಗಳಲ್ಲಿ ವಿಜಯಾಬ್ಯಾಂಕು ಕೂಡಾ ಒಂದಾಗಿದೆ. ದೇಶಾದ್ಯಂತ ಶಾಖೆಗಳು, ದೊಡ್ಡ ಮೊತ್ತದ ಠೇವಣಿ ಹಾಗೂ ಸಾಲ ನೀಡಿಕೆ ವ್ಯವಹಾರದಲ್ಲಿ ಪ್ರಬುದ್ಧತೆ ಇತ್ಯಾದಿ ಕಾರಣಗಳಿಗಾಗಿ ಜಿಲ್ಲೆಯ ಇತರ ರಾಷ್ಟ್ರೀಕೃತ ಬ್ಯಾಂಕುಗಳಂತೆಯೇ ವಿಜಯಾಬ್ಯಾಂಕ್ ಖ್ಯಾತಿ ಪಡೆದಿದೆ. ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಉದ್ಯೋಗ, ಉದ್ಯಮಾಸಕ್ತರಿಗೆ ಅರ್ಹ ಸಾಲ ನೀಡಿಕೆ ಇವೆಲ್ಲದರ ಪರಿಣಾಮವಾಗಿ ವಿಜಯಾಬ್ಯಾಂಕ್ ಲಾಭದಾಯಕವಾಗಿದ್ದು, ಠೇವಣಿದಾರರಿಗೂ ತಕ್ಕ ಡಿವಿಡೆಂಡ್ ನೀಡುತ್ತಿದೆ. ಲಾಭದಾಯಕವಾಗಿ ನಡೆಯುತ್ತಿರುವ ವಿಜಯಾ ಬ್ಯಾಂಕನ್ನು ನಷ್ಟದಾಯಕವಾಗಿ ನಡೆಯುತ್ತಿರುವ ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ಪ್ರಸ್ತಾಪ ಪ್ರಗತಿ ವಿರೋಧಿಯಾಗಿದೆ. ಜಿಲ್ಲೆಯ ಜನತೆ ಇದನ್ನು ವಿರೋಧಿಸುತ್ತಿದ್ದಾರೆ. ವಿಜಯಾ ಬ್ಯಾಂಕ್‌ನ ನೌಕರರೂ ಇದನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಹಾಗಿದ್ದೂ ದ.ಕ.ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲ್ ತುಟಿ ಬಿಚ್ಚದಿರುವುದು ಖಂಡನೀಯವಾಗಿದೆ ಎಂದು ಸಿಪಿಎಂ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News