ಸಾಲಮನ್ನಾ ಗೊಂದಲ ನಿವಾರಣೆಗೆ ಆಗ್ರಹ: ರೈತಸಂಘದಿಂದ ಮುಖ್ಯಮಂತ್ರಿಗೆ ಮನವಿ

Update: 2018-10-17 12:19 GMT

ಪುತ್ತೂರು, ಅ. 17: ರಾಜ್ಯ ಸರ್ಕಾರವು ರೈತರಿಗೆ 2 ಲಕ್ಷ ರೂ. ತನಕದ ಸುಸ್ತಿಸಾಲವನ್ನು ಮನ್ನಾ ಮಾಡುತ್ತಿದ್ದು, ಈ ಬಗ್ಗೆ ದ.ಕ. ಜಿಲ್ಲೆಯ ರೈತರಿಗೆ ಹಲವಾರು ಗೊಂದಗಳಿವೆ. ಈ ಗೊಂದಲಗಳನ್ನು ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. 

ಸಾಲ ಮನ್ನಾ ವಿಚಾರದಲಿ ಸರ್ಕಾರದ ಹೇಳಿಕೆ ಮತ್ತು ಅಧಿಕಾರಿಗಳ ಹೇಳಿಕೆಗಳು ಬೇರೆ ಬೇರೆಯಾಗಿದ್ದು, ಸಹಕಾರಿ ಸಂಸ್ಥೆಗಳು ಹಾಗೂ ಬ್ಯಾಂಕ್‍ಗಳು ಭಿನ್ನ ರೀತಿಯ ಅರ್ಜಿ ಫಾರಂಗಳನ್ನು ವಿತರಿಸುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಸುಪ್ರೀಂ ಕೋರ್ಟು ಬ್ಯಾಂಕ್‍ಗಳಿಗೆ ಆಧಾರ್ ಕಡ್ಡಾಯವಿಲ್ಲ ಎಂದು ಹೇಳಿದ್ದರೂ ಕೋರ್ಟ್ ಆದೇಶಕ್ಕೆ ಬೆಲೆ ನೀಡುತ್ತಿಲ್ಲ. ಆಧಾರ್ ಕಾರ್ಡ್, ಪಾನ್ ಕಾರ್ಡ್, ರೂಪೆ ಕಾರ್ಡ್, ರೇಶನ್ ಕಾರ್ಡ್, ಪಹಣಿ ಪತ್ರ, ಭಾವಚಿತ್ರ, ಆದಾಯ ದೃಡೀಕರಣ, ವಾಸ್ತವ್ಯ ದೃಡೀಕರಣ ಮತ್ತಿತರ ದಾಖಲೆಗಳನ್ನು ಕೇಳುತ್ತಾ ರೈತರಿಗೆ ಮಾನಸಿಕ ಕಿರುಕುಳ ನೀಡುತ್ತಿ ದ್ದಾರೆ. ರೈತರನ್ನು ಗೋಳು ಹೊಯ್ದು ಅವರ ಮಾನಸಿಕ ನೆಮ್ಮದಿ ಕೆಡಿಸುತ್ತಿದ್ದಾರೆ. ಅಧಿಕಾರಿಗಳು ಹೊಸ ದಾಖಲೆಯನ್ನು ಕೇಳುತ್ತಿರುವುದರಿಂದ ರೈತರಿಗೆ ಗೊಂದಲಗಳಾಗಿದ್ದು ಈ ಬಗ್ಗೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು.

ದ.ಕ. ಜಿಲ್ಲೆಯಲ್ಲಿ ಬೆಳೆಸಾಲ ಹೆಚ್ಚೆಂದರೆ ಎಕ್ರೆಗೆ ರೂ. 40 ಸಾವಿರದಿಂದ 50 ಸಾವಿರದ ತನಕ ರೈತರು ಪಡೆದುಕೊಂಡಿದ್ದಾರೆ. ಇಲ್ಲಿ ಅವಧಿ ಸಾಲಗಳನ್ನೂ ಮರುಪಾವತಿಸಲು ಸಾಧ್ಯವಾಗದೆ ಸುಸ್ತಿಯಾದವರಿದ್ದಾರೆ. ಬೆಳೆ ಸಾಲ ಇಲ್ಲದ ರೈತರ ಸುಸ್ತಿ ಅವಧಿ ಸಾಲಕ್ಕೆ  ಸಾಲಮನ್ನಾ ಯೋಜನೆಯನ್ನು ಬದಲಾಯಿಸಬೇಕು ಎಂದು ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News