ಪುಂಜಾಲಕಟ್ಟೆ: ಲಂಚ ಪಡೆದ ಆರೋಪ; ಇಬ್ಬರು ಪೊಲೀಸರು ಅಮಾನತು

Update: 2018-10-17 13:01 GMT

ಬಂಟ್ವಾಳ, ಅ. 17: ಇತ್ತೀಚೆಗೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಪತ್ತೆಗೊಂಡ ಸ್ಫೋಟಕ ಸಾಮಗ್ರಿಗಳ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಲಂಚ ಪಡೆದ ಆರೋಪದ ಮೇರೆಗೆ ಪುಂಜಾಲಕಟ್ಟೆ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಎಸ್ಸೈ ಲಕ್ಷ್ಮಣ್ ಹಾಗೂ ಮುಖ್ಯಪೇದೆ ಇಬ್ರಾಹೀಂ ಅಮಾನತುಗೊಂಡಿರುವ ಪೊಲೀಸರು ಎಂದು ಹೇಳಲಾಗುತ್ತಿದೆ.

ಸೆ. 24ರಂದು ಇಲ್ಲಿನ ಬಸವನಗುಡಿ ನಿವಾಸಿ, ಆರೋಪಿ ಚಿನ್ನಸ್ವಾಮಿ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ ಲಕ್ಷಾಂತರ ರೂ. ಮೌಲ್ಯದ ಸ್ಫೋಟಕ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವಾಗ ಡಿಸಿಐಬಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.

ವಿಚಾರಣೆ ವೇಳೆ ಆರೋಪಿ ಚಿನ್ನಸ್ವಾಮಿ, ಪೊಲೀಸರಾದ ಲಕ್ಷ್ಮಣ್ ಹಾಗೂ ಇಬ್ರಾಹೀಂ ತನ್ನನ್ನು ಬೆದರಿಸಿ, 25 ಸಾವಿರ ರೂ. ಪಡೆದಿದ್ದಾರೆ ಎಂದು ಆರೋಪಿಸಿದ್ದನು. ಹಣ ಪಡೆದೂ ಡಿಸಿಐಬಿ ಪೊಲೀಸರಿಗೆ ಮಾಹಿತಿ ನೀಡಿ ತನ್ನನ್ನು ಬಂಧಿಸಲಾಗಿದೆ ಎಂದು ಚಿನ್ನಸ್ವಾಮಿ ಆರೋಪಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಅವರು ಎಎಸ್ಪಿ ಸೊನಾವಣೆ ಋಷಿಕೇಶ್ ಭಗವಾನ್ ಅವರ ಮೂಲಕ ತನಿಖೆಗೆ ಆದೇಶಿಸಿದ್ದು, ಇದರ ವರದಿ ಪ್ರಕಾರ ಇಬ್ಬರು ಪೊಲೀಸರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News