ಕಾರ್ಕಳ: ಐದು ಮನೆಗಳಿಗೆ ಸಿಡಿಲಿನಿಂದ ಹಾನಿ

Update: 2018-10-17 13:59 GMT

ಉಡುಪಿ, ಅ.17: ಮಂಗಳವಾರ ಅಪರಾಹ್ನದ ವೇಳೆ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಕಾರ್ಕಳ ತಾಲೂಕಿನ ಐದು ಮನೆಗಳಿಗೆ ಹಾನಿ ಉಂಟಾದ ಬಗ್ಗೆ ವರದಿಗಳು ಬಂದಿವೆ. ಆದರೆ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ.

ನಿನ್ನೆ ಅಪರಾಹ್ನ 2ರಿಂದ 3 ಗಂಟೆ ಸುಮಾರಿಗೆ ಗುಡುಗು-ಸಿಡಿಲು ಸಹಿತ ಮಳೆ ಸುರಿದಿತ್ತು. ಈ ವೇಳೆ ಕಾರ್ಕಳ ತಾಲೂಕಿನ ಮುದ್ರಾಡಿಯ ನಾಲ್ಕು ಹಾಗೂ ಕಬ್ಬಿನಾಲೆಯ ಒಂದು ಮನೆಗೆ ಸಿಡಿಲು ಬಡಿದು ಒಟ್ಟು ಸುಮಾರು 1.50ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿತ್ತು.

ಮುದ್ರಾಡಿಯ ಭೋಜ ಪೂಜಾರಿಯವರ ವಾಸ್ತವ್ಯದ ಪಕ್ಕಾ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 35,000ರೂ. ನಷ್ಟ ಸಂಭವಿಸಿದೆ. ಅದೇ ಗ್ರಾಮದ ಹಿರಿಯಣ್ಣ ಪೂಜಾರಿ ಅವರ ಮನೆಗೂ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ಉಪಕರಣಗಳೆಲ್ಲವೂ ಹಾನಿಗೊಂಡಿದ್ದು, ಮನೆಗೂ ಭಾಗಶ: ಹಾನಿ ಯಾಗಿ 35,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಮುದ್ರಾಡಿ ಗ್ರಾಮದ ಸವಿತಾ ಅವರ ವಾಸ್ತವ್ಯದ ಪಕ್ಕಾ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಹಾಗೂ ಮನೆಗೆ ಭಾಗಶ: ಹಾನಿಯಾಗಿದ್ದು 15,000ರೂ. ಹಾಗೂ ಸೋಮಯ್ಯ ನಾಯ್ಕರ ಪಕ್ಕಾ ಮನೆಗೂ ಸಿಡಿಲು ಬಡಿದು ಸುಮಾರು 5,000ರೂ.ನಷ್ಟು ನಷ್ಟವಾಗಿದೆ. ಅಲ್ಲದೇ ಕಬ್ಬಿನಾಲೆ ಗ್ರಾಮದ ಶ್ರೀಕಾಂತ ಶೆಟ್ಟಿಗಾರ್ ಅವರ ವಾಸದ ಮನೆಗೆ ಸಿಡಿಲು ಬಡಿದು ಸುಮಾರು 40,000ರೂ.ಗಳಷ್ಟು ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿಯ ಮಾಹಿತಿ ತಿಳಿಸಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 30.66 ಸೆ.ಮೀ. ಮಳೆ ಬಿದ್ದಿದೆ. ಉಡುಪಿಯಲ್ಲಿ 39.1ಮಿ.ಮೀ., ಕುಂದಾಪುರದಲ್ಲಿ 27.7ಮಿ.ಮೀ. ಹಾಗೂ ಕಾರ್ಕಳದಲ್ಲಿ 25.2ಮಿ.ಮೀ.ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News