ಮಹಿಳೆಯರ ದಕ್ಷಿಣ ವಲಯ ಅಂತರ ವಿವಿ ಖೋ-ಖೋ: ಮಂಗಳೂರು, ಮೈಸೂರು ಲೀಗ್ ಹಂತಕ್ಕೆ ತೇರ್ಗಡೆ

Update: 2018-10-17 14:04 GMT

ಉಡುಪಿ, ಅ.17: ಆತಿಥೇಯ ಮಂಗಳೂರು ವಿವಿ ಹಾಗೂ ಮೈಸೂರು ವಿವಿಗಳು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳೂರು ವಿವಿ ಹಾಗೂ ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಜಂಟಿ ಆಶ್ರಯದಲ್ಲಿ ನಡೆದಿರುವ ಮಹಿಳೆಯರ ದಕ್ಷಿಣ ವಲಯ ಅಂತರ ವಿವಿ ಖೋ-ಖೋ ಚಾಂಪಿಯನ್‌ಷಿಪ್‌ನ ಅಂತಿಮ ಲೀಗ್ ಹಂತವನ್ನು ಪ್ರವೇಶಿಸಿವೆ.

ಟೂರ್ನಿಯಲ್ಲಿ ಕರ್ನಾಟಕ ಮತ್ತು ಕೇರಳದ ತಲಾ ಎರಡು ತಂಡಗಳು ಲೀಗ್ ಹಂತದಲ್ಲಿ ಆಡುವ ಅರ್ಹತೆಯನ್ನು ಪಡೆದಿವೆ. ಕರ್ನಾಟಕದ ಮಂಗಳೂರು ಮತ್ತು ಮೈಸೂರು ವಿವಿಗಳೊಂದಿಗೆ ಕೇರಳದ ಕಲ್ಲಿಕೋಟೆ ವಿವಿ ಹಾಗೂ ಕೇರಳ ವಿವಿಗಳು ಸಹ ನಾಲ್ಕು ತಂಡಗಳ ಲೀಗ್‌ನಲ್ಲಿ ಆಡುವ ಅರ್ಹತೆ ಪಡೆದಿವೆ.
ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಬಡ್ತಿ ಪಡೆದು ಇಂದು ತನ್ನ ಮೊದಲ ಪಂದ್ಯ ವನ್ನಾಡಿದ ಮಂಗಳೂರು ವಿವಿ ಮಹಿಳಾ ತಂಡ, ಕ್ವಾರ್ಟರ್ ಫೈನಲ್ ಎದುರಾಳಿ ಪಾಂಡಿಚೇರಿಯ ಪಾಂಡಿಚೇರಿ ವಿವಿಯನ್ನು 11-04 ಅಂಕಗಳ ಅಂತರದಿಂದ ಸುಲಭವಾಗಿ ಪರಾಭವಗೊಳಿಸಿತು.

ಉಳಿದಂತೆ, ಮೈಸೂರು ವಿವಿ, ತಮಿಳುನಾಡಿನ ಮಧುರೈ ಕಾಮರಾಜ್ ವಿವಿಯನ್ನು 10-06 ಅಂತರದಿಂದ ರೋಚಕವಾಗಿ ಸೋಲಿಸಿದರೆ, ಕಲ್ಲಿಕೋಟೆ ವಿವಿ, ತಮಿಳುನಾಡು ಸೇಲಂನ ಪೆರಿಯಾರ್ ವಿವಿಯನ್ನು 17-02ರ ಅಂತರ ದಿಂದ ಏಕಪಕ್ಷೀಯವಾಗಿ ಹಿಮ್ಮೆಟ್ಟಿಸಿತು.

ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳ ವಿವಿ, ತನ್ನ ಎದುರಾಳಿ ಆಂಧ್ರ ಪ್ರದೇಶದ ಮಚಲಿಪಟ್ಟಣದ ಕೃಷ್ಣ ವಿವಿಯನ್ನು 11-02 ಅಂಕಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿತು.

ದಕ್ಷಿಣ ವಲಯದ ಚಾಂಪಿಯನ್ ತಂಡವನ್ನು ನಿರ್ಧರಿಸುವ ಮುಂದಿನ ಹಂತದ ಪಂದ್ಯಗಳು ಲೀಗ್ ಮಾದರಿಯಲ್ಲಿ ನಡೆಯಲಿವೆ. ಇದರಲ್ಲಿ ಪ್ರತಿಯೊಂದು ತಂಡ, ಉಳಿದ ಮೂರು ತಂಡಗಳನ್ನು ಎದುರಿಸಿ ಆಡಬೇಕಿದೆ. ಮೂರು ಪಂದ್ಯಗಳಲ್ಲಿ ಗರಿಷ್ಠ ಅಂಕ ಪಡೆದ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಲಿದೆ.

ಗುರುವಾರ ಬೆಳಗ್ಗೆ 9 ಗಂಟೆಗೆ ಚಾಂಪಿಯನ್ ತಂಡವನ್ನು ನಿರ್ಧರಿಸುವ ಅಂತಿಮ ಲೀಗ್ ಪಂದ್ಯಗಳು ನಡೆಯಲಿದ್ದು ಮೊದಲು ಮಂಗಳೂರು ವಿವಿ, ಮೈಸೂರು ವಿವಿಯನ್ನುಪ ಎದುರಿಸಿ ಆಡಿದರೆ, ಕೊನೆಯ ಪಂದ್ಯದಲ್ಲಿ ಕೇರಳ ವಿವಿ ಹಾಗೂ ಕಲ್ಲಿಕೋಟೆ ವಿವಿ ಪರಸ್ಪರ ಸೆಣಸಲಿದೆ.

ಬಳಿಕ 11 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಪತಿ ಡಾ. ಕಿಶೋರ್‌ ಕುಮಾರ್ ಸಿ.ಕೆ., ರಿಜಿಸ್ಟ್ರಾರ್ ಪ್ರೊ. ಎ.ಎಂ.ಖಾನ್, ಎಡಿಸಿ ಕೆ.ವಿದ್ಯಾಕುಮಾರಿ, ಪೌರಾಯುಕ್ತ ಜನಾರ್ದನ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News