ಉಡುಪಿ: ದಾಖಲೀಕರಣಗೊಂಡ ಕೊರಗ ಸಮುದಾಯದ ವೃತ್ತಿ, ಬದುಕು

Update: 2018-10-17 14:06 GMT

ಉಡುಪಿ, ಅ. 16: ಮಾಹೆಯ ಆಡಳಿತಕ್ಕೊಳಪಟ್ಟ ಇಲ್ಲಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕರಾವಳಿಯ ಮೂಲನಿವಾಸಿಗಳಾದ ಕೊರಗ ಸಮುದಾಯದ ವೃತ್ತಿ ಕೌಶಲ್ಯ ಹಾಗೂ ಅವರ ಜೀವನ ಶೈಲಿಯನ್ನು ಏಕಕಾಲದಲ್ಲಿ ದಾಖಲಿಸಿಕೊಳ್ಳಲಾಗಿದೆ.

ಹಿರಿಯಡ್ಕ ಸಮೀಪದ ಬೊಮ್ಮರಬೆಟ್ಟು ಗ್ರಾಪಂ ವ್ಯಾಪ್ತಿಯ ಪಡ್ಡಾಂ, ಪಡುಭಾಗ ಮನೆ, ಮುತ್ತೂರು ಕ್ರಾಸ್ ಬಳಿಯ ಕೊರಗರ ಕೊಪ್ಪದಲ್ಲಿ ಕೊರಗ ಸಮುದಾಯದ ಮಂದಿ ತಯಾರಿಸುವ ಹೆಡಿಗೆ (ಪುಡಾಯಿ), ಗೆರಸೆ (ತಡ್ಪೆ), ಕುಡ್ಪು, ತಟ್ಟಿಕುಡ್ಪು, ಪೇರರ್ಪಿಕುರುವೆ ಮುಂತಾದವುಗಳ ತಯಾರಿಯ ವಿವಿಧ ಹಂತಗಳನ್ನು ದಾಖಲಿಸಿಕೊಳ್ಳಲಾಗಿದೆ.

ಸಮುದಾಯದ ವಾಸು ಅವರ ಹಿರಿತನದಲ್ಲಿ ಗಣೇಶ, ಮಂಜು, ಗುಲಾಬಿ, ಗೌರಿ ಅವರು ತಯಾರಿಯ ಕ್ರಮಗಳನ್ನು, ಬಳಸುವ ಬೀಳಲುಗಳನ್ನು ಪರಿಚಯಿ ಸುತ್ತಾ ಗೆರಸೆ, ಹೆಡಿಗೆ ಇತ್ಯಾದಿಗಳನ್ನು ಸಿದ್ಧಗೊಳಿಸಿದರು. ಈ ಬಗ್ಗೆ ಸಂಪ ಹಾಗೂ ಪವಿತ್ರ ಮಾಹಿತಿಗಳನ್ನು ನೀಡಿ ಸಹಕರಿಸಿದರು.

ಬೀಳಲುಗಳನ್ನು ಕೆಲಸಕ್ಕೆ ಉಪಯೋಗಿಸುವ ಮೊದಲು ಹೇಗೆ ಹೆಣಿಗೆಗೆ ಸಿದ್ಧಪಡಿಸಲಾಗುತ್ತದೆ (ಬೂರು ಕೀಸುನು, ಬೂರು ಪಿರೆಸುನು) ಎಂಬುದನ್ನೂ ಮಾಡಿತೋರಿಸಿದರು. ತಯಾರಿಯ ಹಂತಗಳಾದ ಅಳತೆಯ ನಿರ್ಧಾರ ಇದಕ್ಕೆ ಅನುಗುಣವಾಗಿ ತಳವನ್ನು ಮಾಡಿಕೊಳ್ಳುವುದು. ಗೆರಸೆಯಾದರೆ ಸಕ್ಕಣ (ಗೆರಸೆಯ ವ್ಯಾಪ್ತಿಯ ಹರವು) ಹಾಕುವುದು, ಬಳಿಕ ಬದಿ ಕಟ್ಟುವುದು (ಅರು ಕಟ್ಟುನು) ಹೀಗೆ ಬೇರೆ ಬೇರೆ ಹಂತಗಳ ತಯಾರಿಯನ್ನು ವಿವರಣೆಗಳೊಂದಿಗೆ ದಾಖಲಿಸಿಕೊಳ್ಳಲಾಗಿದೆ.

ದಾಖಲಾತಿಯ ಸುಮಾರು ಐದು ಗಂಟೆಗಳ ಅವಧಿಯಲ್ಲಿ ಕೊರಗ ಸಮುದಾಯದ ದೈವ-ದೇವರು, ನಂಬಿಕೆಗಳು, ಆಚರಣೆಗಳು, ಜನನ, ಹೆಣ್ಣು ಪುಷ್ಪವತಿಯಾಗುವ ಸಂದರ್ಭ, ಮದುವೆ, ಸೀಮಂತ, ಮಗು ಹುಟ್ಟಿದಾಗ ನಡೆವ ಆಚರಣೆಗಳ ಕುರಿತ ವಿಸ್ತಾರವಾದ ವಿವರಣೆಗಳನ್ನು ಮತ್ತು ಸಾವಿನ ಬಳಿಕದ ನಡವಳಿಕೆಗಳನ್ನು ಪ್ರಶ್ನೋತ್ತರಗಳ ಮೂಲಕ ಕೇಳಿ-ಹೇಳಿಸಿ ದಾಖಲಿಸಿ ಕೊಳ್ಳಲಾಗಿದೆ ಎಂದು ಕೇಂದ್ರದ ಸಂಯೋಜನಾಧಿಕಾರಿ ವರದೇಶ ಹಿರೇಗಂಗೆ ತಿಳಿಸಿದರು.

ಕೊರಗ ಸಮುದಾಯದ ಜೀವನ ಕ್ರಮ ಹಾಗೂ ವೃತ್ತಿ ಕೌಶಲ್ಯಗಳನ್ನು ಏಕಕಾಲದಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದೊಂದು ಅಧ್ಯಯನ ಅಕಾಂಕ್ಷಿಗಳಿಗೆ ಆಧಾರವಾಗಿ ಕೇಂದ್ರದಲ್ಲಿ ಕಾಪಿಡಲಾಗುತ್ತದೆ ಎಂದು ಅವರು ತಿಳಿಸಿದರು.

ಈ ದಾಖಲೀಕರಣದಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ಅರ್ಪಿಸಿದರು.ವಿದ್ವಾಂಸ ಕೆ. ಎಲ್. ಕುಂಡಂತಾಯ ಪ್ರಶ್ನೋತ್ತರ ದಾಖಲೀಕರಣ ವನ್ನು ನಿರ್ವಹಿಸಿದರು. ಕೇಂದ್ರದ ಲಚ್ಚೇಂದ್ರ ಹಾಗೂ ಭಾರತಿ ವೀಡಿಯೋ ದಾಖಲೀಕರಣ ಮತ್ತು ಛಾಯಾಚಿತ್ರ ಗ್ರಹಣದಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News