ಪೋಳ್ಯ ನಾಡಬಾಂಬ್ ಸ್ಫೋಟ ಪ್ರಕರಣ: ಆರೋಪಿ ಪತ್ತೆಗಾಗಿ 5 ಪೊಲೀಸ್ ತಂಡ

Update: 2018-10-17 14:20 GMT

ಪುತ್ತೂರು, ಅ. 17: ಮನೆ ಮಂದಿ ಮಲಗಿದ್ದ ವೇಳೆಯಲ್ಲಿ ಮನೆಯ ಸುತ್ತ ನಾಡಬಾಂಬ್ ಸಿಡಿಸಿ ಮನೆಯನ್ನು ಧ್ವಂಸಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಯ ಪತ್ತೆಗಾಗಿ 5 ಪೊಲೀಸ್ ತಂಡವನ್ನು ರಚಿಸಲಾಗಿದೆ. ಈ ಪೈಕಿ 2 ತಂಡಗಳು ಕೇರಳಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.

ಸೋಮವಾರ ತಡರಾತ್ರಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ  ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಈ ಘಟನೆ ನಡೆದಿತ್ತು.  ಘಟನೆಯಿಂದ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವ ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಕೆಲಸಕ್ಕಿದ್ದ ಕೇರಳದ ವ್ಯಕ್ತಿ ಈ ದುಷ್ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆಯನ್ನು ನಡೆಸುತ್ತಿರುವ ಪೊಲೀಸ್ ತಂಡ ಆರೋಪಿಯ ಪತ್ತೆಗಾಗಿ ವ್ಯಾಪಕ ಬಲೆ ಬೀಸಿದೆ.

ಆರೋಪಿಯು ನಾರಾಯಣ ಪ್ರಸಾದ್ ಅವರ ಮನೆಯ ಸುತ್ತ 3 ಕಡೆಗಳಲ್ಲಿ ನಾಡ ಬಾಂಬ್ ಇರಿಸಿ ಸ್ಪೋಟಿಸಲು ಯತ್ನಿಸಿದ್ದ, ಆದರೆ ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಎದ್ದು ಬಂದ ಕಾರಣ ಒಂದು ಬಾಂಬ್ ಮಾತ್ರ ಬೆಂಕಿ ಹಚ್ಚಿ ಸ್ಪೋಟಗೊಳಿಸಿ ಆರೋಪಿ ಕತ್ತಲಲ್ಲಿ ಪಾರಾರಿಯಾಗಿದ್ದ, ಬಾಂಬ್ ಸಿಡಿಸಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಲು ಆರೋಪಿ ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತನ್ನ ಮನೆಯಲ್ಲಿನ ಕೊಠಡಿಯಲ್ಲಿ ವಾಸವಾಗಿದ್ದು, ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೇರಳದ ಬಾಬು ಯಾನೆ ಬಾಲು ಈ ಕೃತ್ಯ ಎಸಗಿರಬಹುದು ಎಂದು ನಾರಾಯಣ ಪ್ರಸಾದ್ ಅವರು ಶಂಕೆ ವ್ಯಕ್ತ ಪಡಿಸಿದ್ದರು. ಸ್ಪೋಟಗೊಂಡ ಮನೆಯಲ್ಲಿ ಯಾವುದೇ ಸಾಕ್ಷ್ಯಗಳು ದೊರಕಿಲ್ಲ. ಮನೆ ಮುಂಭಾಗ ಅಳವಡಿಸಿದ್ದ ಸಿಸಿ ಕ್ಯಾಮರಾವೂ ನಿಷ್ಪ್ರಯೋಜಕವಾಗಿದೆ. ಈ ಸಿಸಿ ಕ್ಯಾಮರಾ ಚಾಲೂ ಸ್ಥಿತಿಯಲ್ಲಿದ್ದರೂ ಸ್ಟೋರೇಜ್ ಇಲ್ಲದ ಕಾರಣ ಆರೋಪಿಯ ಗುರುತು ಪತ್ತೆಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಪೊಲೀಸರು ಇತರ ಸಾಕ್ಷ್ಯಗಳನ್ನು ಕಲೆ ಹಾಕುವತ್ತ ಮುಂದಾಗಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಎಸ್ಪಿ ಡಾ. ರವಿಕಾಂತೇಗೌಡ, ಡಿವೈಎಸ್ಪಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಎಸ್‍ಐ ಅಜಯ್ ಕುಮಾರ್ ಅವರ ನೇತೃತ್ವದಲ್ಲಿ ಎರಡು ತಂಡಗಳು ಕೇರಳಕ್ಕೆ ತೆರಳಿದೆ. ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡ ಸ್ಥಳೀಯವಾಗಿ ಮಾಹಿತಿ ಕಲೆ ಹಾಕುತ್ತಿದೆ ಎಂದು ಮಾಹಿತಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News