ವಿವಿ ಖೋಖೋ ಚಾಂಪಿಯನ್‌ಷಿಪ್: ಪ್ರಶಸ್ತಿಗಾಗಿ ಮಂಗಳೂರು-ಮೈಸೂರು ನಡುವೆ ಸೆಣಸಾಟ

Update: 2018-10-17 16:15 GMT

ಉಡುಪಿ, ಅ.17: ಇಂದು ಸಂಜೆ ತಾವಾಡಿದ ಅಂತಿಮ ಸುತ್ತಿನ ಎರಡೂ ಲೀಗ್ ಪಂದ್ಯಗಳನ್ನು ಜಯಿಸಿದ ಆತಿಥೇಯ ಮಂಗಳೂರು ಹಾಗೂ ಮೈಸೂರು ವಿವಿ ಮಹಿಳಾ ತಂಡಗಳು, ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿರುವ ಮಹಿಳೆಯರ ದಕ್ಷಿಣ ವಲಯ ಅಂತರ ವಿವಿ ಖೋಖೋ ಚಾಂಪಿಯನ್‌ಷಿಪ್ ಪ್ರಶಸ್ತಿಗಾಗಿ ನಾಳೆ ಸೆಣಸಾಟ ನಡೆಸಲಿವೆ.

ಗುರುವಾರ ಬೆಳಗ್ಗೆ 9 ಗಂಟೆಗೆ ನಡೆಯುವ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಮಂಗಳೂರು ಮತ್ತು ಮೈಸೂರು ಪರಸ್ಪರ ಸೆಣಸಲಿದ್ದು, ಇದರ ವಿಜಯಿ ತಂಡ ದಕ್ಷಿಣ ವಲಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಲಿದೆ. ಕೇರಳ ವಿವಿ ಹಾಗೂ ಕಲ್ಲಿಕೋಟೆ ವಿವಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಸೆಣಸಲಿವೆ.

ಬುಧವಾರ ಅಪರಾಹ್ನ ನಡೆದ ಮೊದಲ ಲೀಗ್ ಪಂದ್ಯದಲ್ಲಿ ಕೇರಳ ವಿವಿಯನ್ನು 7-3 ಅಂಕಗಳ ಅಂತರದಿಂದ ಮಣಿಸಿದ ಮಂಗಳೂರು ವಿವಿ ಮಹಿಳೆಯರು, ಸಂಜೆ ಎರಡನೇ ಪಂದ್ಯದಲ್ಲಿ ಬಲಿಷ್ಠ ಕಲ್ಲಿಕೋಟೆ ವಿವಿಯನ್ನು ಅತ್ಯಂತ ರೋಚಕವಾಗಿ 8-7 ಅಂಕಗಳಿಂದ ಮಣಿಸಿ ಅಜೇಯವಾಗುಳಿದರು. ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳ್ಳಿರಿಸಿದ ಈ ಪಂದ್ಯದಲ್ಲಿ ವಿಜಯಲಕ್ಷ್ಮಿ ಕೊನೆಗೂ ಮಂಗಳೂರು ವಿವಿ ತಂಡಕ್ಕೆ ಒಲಿಯಿತು.

ಮೈಸೂರು ವಿವಿ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಕಲ್ಲಿಕೋಟೆ ವಿವಿಯನ್ನು ಜಿದ್ದಾಜಿದ್ದಿನ ಸೆಣಸಾಟದಲ್ಲಿ 4-2ರ ಅಂತರದಿಂದ ಹಿಮ್ಮೆಟ್ಟಿಸಿದರೆ, ಎರಡನೇ ಪಂದ್ಯದಲ್ಲಿ ಕೇರಳ ವಿವಿಯನ್ನು 7-4ರ ಅಂತರದಿಂದ ಪರಾಭವಗೊಳಿಸಿ ಅಜೇಯವಾಗುಳಿಯಿತು. ಕೇರಳ ಹಾಗೂ ಕಲ್ಲಿಕೋಟೆ ವಿವಿಗಳು ಲೀಗ್‌ನಲ್ಲಿ ತಾವಾಡಿದ ಎರಡೂ ಪಂದ್ಯಗಳನ್ನು ಸೋತು ನಿರಾಶೆ ಅನುಭವಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News