ಅ. 21: ಉಡುಪಿ ಜಿಲ್ಲಾ ಭಜನಾ ಸಮಾವೇಶ

Update: 2018-10-17 15:36 GMT

ಉಡುಪಿ, ಅ.17: ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಭಜನಾ ಸಮಾವೇಶ ಅ.21ರಂದು ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಿವ ಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ನಡೆಯುವ ಇಡೀ ದಿನದ ಕಾರ್ಯಕ್ರಮದಲ್ಲಿ ಭಜನಾ ಕಮ್ಮಟ, ಕುಣಿತ ಭಜನೆ ಹಾಗೂ ನಗರ ಭಜನೆ ನಡೆಯಲಿವೆ ಎಂದರು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀ ಬೆಳಗ್ಗೆ 10:30ಕ್ಕೆ ಭಜನಾ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹಾಗೂ ಒಕ್ಕೂಟದ ಗೌರವಾಧ್ಯಕ್ಷ ಜಿ.ಶಂಕರ್ ಅವರು ನಗರ ಭಜನೆಗೆ ಚಾಲನೆ ನೀಡಲಿದ್ದಾರೆ. ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಭಜನಾ ಕಮ್ಮಟ ನಡೆಸಿಕೊಡಲಿದ್ದಾರೆ ಎಂದರು.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶಂಕರ್‌ದಾಸ್ ಚೆಂಡ್ಕಳ ಕುಣಿತದ ಭಜನೆಯ ತರಬೇತಿ ನೀಡಲಿದ್ದಾರೆ. ಜಿಲ್ಲಾ ಒಕ್ಕೂಟದಿಂದ ನಡೆಯುವ ವಿಶೇಷ ನಗರ ಭಜನೆ ರಾಜಾಂಗಣದಿಂದ ಹೊರಡು ರಥಬೀದಿ, ತೆಂಕಪೇಟೆ, ಡಯಾನ ಸರ್ಕಲ್, ಕೆಎಂ ಮಾರ್ಗ, ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಬಡಗುಪೇಟೆ ಮೂಲಕ ಮಧ್ವಮಂಟಪದಲ್ಲಿ ಸಮಾಪನಗೊಳ್ಳಲಿದೆ ಎಂದರು.

ಭಜನಾ ಸಮಾವೇಶದಲ್ಲಿ ಜಿಲ್ಲೆಯ ಮೂರು ತಾಲೂಕುಗಳ 800ಕ್ಕೂ ಅಧಿಕ ಭಜನಾ ಮಂಡಳಿಗಳ 2500ಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶಿವಕುಮಾರ್ ಅಂಬಲಪಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್.ಕಿದಿಯೂರು, ಕಾರ್ಯಾಧ್ಯಕ್ಷ ಮಾಧವ ಸುವರ್ಣ ಎರ್ಮಾಳ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್ನ, ಜಿಲ್ಲಾ ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ಕಡಿಯಾಳಿ, ಕಾರ್ಕಳ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪ್ರಭು ಪಳ್ಳಿ, ಕುಂದಾಪುರ ತಾಲೂಕು ಅಧ್ಯಕ್ಷ ಜಯಕರ ಪೂಜಾರಿ ಗುಲ್ವಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News