ವೇಣೂರು ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಅಮಾನತು

Update: 2018-10-19 17:25 GMT

ಬೆಳ್ತಂಗಡಿ, ಅ. 19:  ವೇಣೂರು ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆಯ ಹೆಸರಿನಲ್ಲಿ ಡಿವೈಎಫ್‍ಐ ನಾಯಕ ರಿಯಾಝ್ ಅವರ ಮೇಲೆ ಹಲ್ಲೆ ನಡೆಸಿದ ಹಾಗೂ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ತಾರಾನಾಥ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಅ. 2 ರಂದು ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ಬೆಳ್ತಂಗಡಿಗೆ ತನ್ನ ಸಹೋದರನೊಂದಿಗೆ ರಾತ್ರಿ ಹೋಗುತ್ತಿದ್ದ ಸಂದರ್ಭ ವೇಣೂರು ಪೊಲೀಸರು ರಿಯಾಝ್ ನನ್ನು ರಸ್ತೆಯಲ್ಲಿ ತಡೆದಿದ್ದು ಬಳಿಕ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.  ಇದಕ್ಕೆ ಸಂಬಂಧಿಸಿದಂತೆ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರಿಗೆ ದೂರು ನೀಡಿದ್ದರು, ಇದೀಗ ಪೊಲೀಸ್ ಇಲಾಖೆಯ ಆಂತರಿಕ ತನಿಖೆ ನಡೆಸಿರುವುದಾಗಿ ತಿಳಿದು ಬಂದಿದ್ದು, ತನಿಖೆಯ ಭಾಗವಾಗಿ ಘಟನೆಯಲ್ಲಿ ಭಾಗಿಯಾಗಿದ್ದ ತಾರನಾಥರನ್ನು ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.

ಅಶ್ರಫ್ ಸಾಲೆತ್ತೂರು ಪ್ರಕರಣದಲ್ಲಿ ಯಾವುದೇ ಕ್ರಮವಿಲ್ಲ

 ರಿಯಾಝ್ ಮಾಂತೂರು ಮೇಲೆ ದೌರ್ಜನ್ಯ ಎಸಗಿದ ವೇಣೂರು ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರನ್ನು ಅಮಾನತು ಗೊಳಿಸಲಾಗಿದ್ದು, ಆದರೆ ಇದಕ್ಕೂ ಮೊದಲು ನಡೆದ ಅಶ್ರಫ್ ಸಾಲೆತ್ತೂರು ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಕ್ಕೆ ಜೈಲಿಗೆ ತಳ್ಳಿದ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮವಾಗಿಲ್ಲ.

ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಬರಹಕ್ಕೆ ಸಂಬಂಧಿಸಿದಂತೆ ಬಂದರು (ಉತ್ತರ) ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಅಶ್ರಫ್ ಸಾಲೆತ್ತೂರು ಅವರನ್ನು ಜೈಲಿಗೆ ತಳ್ಳಿದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿತ್ತು. ಅದು ಆಗ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು.

ಅಶ್ರಫ್ ಸಾಲೆತ್ತೂರು ಅವರ ಫೇಸ್‌ಬುಕ್ ಪೋಸ್ಟ್‌ವೊಂದನ್ನು ಆಧಾರವಾಗಿಟ್ಟುಕೊಂಡ ಬಂದರ್ ಠಾಣೆಯ ಪೊಲೀಸರು ಅಶ್ರಫ್ ವಿರುದ್ಧ ಸ್ವಯಂಪ್ರೇರಿತವಾಗಿ ಸೆ.153, 505(2)ರಂತೆ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅದರಂತೆ ನ್ಯಾಯಾಲಯವು ಅಶ್ರಫ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಒಂದು ವಾರ ಜೈಲಿನಲ್ಲಿ ಕಳೆದ ಅಶ್ರಫ್ ಜಾಮೀನು ಪಡೆದು ಬಿಡುಗಡೆಗೊಂಡ ಬಳಿಕ ತನಗಾದ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆ ಪೊಲೀಸರು ಸೆ.4ರಂದು ಅಶ್ರಫ್‌ಗೆ ಮತ್ತೆ ನೋಟಿಸ್ ಜಾರಿಗೊಳಿಸಿ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು ಎಂದು ಸೂಚಿಸಿದ್ದರು.

ಈ ಸಂದರ್ಭ ಪೊಲೀಸರ ನಡೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಮಧ್ಯೆ ತನಗಾದ ಅನ್ಯಾಯದ ವಿರುದ್ಧ ಪೊಲೀಸ್ ಆಯುಕ್ತರಿಗೆ ಅಶ್ರಫ್ ದೂರು ನೀಡಿದ್ದರು. ಇದರ ವಿರುದ್ಧ ಹೋರಾಟಕ್ಕೆ ಕೆಲವು ಸಂಘಟನೆಗಳೂ ಮುಂದಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News