ಮಹಿಳೆಯರ ದಕ್ಷಿಣ ವಲಯ ಅಂತರ ವಿವಿ ಖೋ-ಖೋ: ಮೈಸೂರು ಚಾಂಪಿಯನ್

Update: 2018-10-19 17:00 GMT
ಮೈಸೂರು ವಿವಿ

ಉಡುಪಿ, ಅ.19: ಮಂಗಳೂರು ವಿವಿ ಹಾಗೂ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿ ಕೊಳ್ಳಲಾದ ಮಹಿಳೆಯರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮೈಸೂರು ವಿವಿ ತಂಡವು ಗೆದ್ದುಕೊಂಡಿದೆ.

ಗುರುವಾರ ನಡೆದ ಅಂತಿಮ ಪಂದ್ಯದಲ್ಲಿ ಮೈಸೂರು ವಿವಿ ತಂಡವು ಅತಿಥೇಯ ಮಂಗಳೂರು ವಿವಿ ತಂಡವನ್ನು ಅತ್ಯಂತ ರೋಚಕವಾಗಿ 12:11 ಅಂಕಗಳ ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದೆ. ಪ್ರಥಮ ಅರ್ಧದಲ್ಲಿ ಮೈಸೂರು ಹಾಗೂ ಮಂಗಳೂರು ಸಮಬಲದ 7:7 ಅಂಕ ದಾಖಲಿಸಿಕೊಂಡರೆ, ದ್ವಿತೀಯ ಅರ್ಧದಲ್ಲಿ ಮೈಸೂರು ವಿವಿಯು ಒಂದ ಅಂಕಗಳ ಮುನ್ನಡೆಯೊಂದಿಗೆ ಅಂದರೆ 5:4 ಅಂಕಗಳೊಂದಿಗೆ ಜಯಭೇರಿ ಸಾಧಿಸಿತು.

ಕಳೆದ ವರ್ಷ ಕೂಡ ಮೈಸೂರು ವಿವಿ ತಂಡವು ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಮಂಗಳೂರು ವಿವಿ ತಂಡವು ನಾಲ್ಕನೆ ಸ್ಥಾನ ಪಡೆದಿತ್ತು. ಈ ಬಾರಿ ಉತ್ತಮ ಪ್ರದರ್ಶನ ನೀಡಿದ ಮಂಗಳೂರು ವಿವಿ ತಂಡವು ಎರಡನೆ ಸ್ಥಾನ ಪಡೆದುಕೊಳ್ಳುವಂತಾಯಿತು.

ಮೂರು ಮತ್ತು ನಾಲ್ಕನೆ ಸ್ಥಾನಕ್ಕಾಗಿ ನಡೆದ ಸೆಣಸಾಟದಲ್ಲಿ ಕಲ್ಲಿಕೋಟೆ ವಿವಿಯು ಕೇರಳ ವಿವಿ ವಿರುದ್ಧ 10:9 ಅಂಕಗಳ ಸುಲಭ ಜಯ ದಾಖಲಿಸಿತು. ಪ್ರಥಮ ಅರ್ಧದಲ್ಲಿ ಕಲ್ಲಿಕೋಟೆ ತಂಡವು 6:4 ಅಂಕಗಳಿಂದ ಮುನ್ನಡೆ ಸಾಧಿಸಿ ದ್ದರೆ, ದ್ವಿತೀಯ ಅರ್ಧದಲ್ಲಿ ಕೇರಳ ವಿವಿ ತಂಡವು 4:5 ಅಂಕಗಳ ಮುನ್ನಡೆ ಪಡೆದುಕೊಂಡಿತು. ಈ ಮೂಲಕ ಕಲ್ಲಿಕೋಟೆ ವಿವಿಯು ಮೂರನೆ ಹಾಗೂ ಕೇರಳ ವಿವಿಯು ನಾಲ್ಕನೆ ಸ್ಥಾನ ಪಡೆದುಕೊಂಡಿತು.

ಉತ್ತಮ ಡಾಡ್ಜರ್ ಪ್ರಶಸ್ತಿಯನ್ನು ಕಲ್ಲಿಕೋಟೆ ವಿವಿಯ ವರ್ಷ ಎಸ್., ಉತ್ತಮ ಚೇಸರ್ ಪ್ರಶಸ್ತಿಯನ್ನು ಮಂಗಳೂರು ವಿವಿಯ ಸವೀನ ಎಸ್., ಉತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಮೈಸೂರು ವಿವಿಯ ವೀಣಾ ಎಸ್. ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಪ್ರಶಸ್ತಿ ಪ್ರದಾನ ಮಾಡಿದರು. ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಂಚಲನ ಟ್ರಸ್ಟ್‌ನ ಪ್ರೇಮ್‌ಪ್ರಸಾದ್ ಶೆಟ್ಟಿ, ಮಂಗಳೂರು ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಮಹೇಶ್ ರಾವ್, ಕಾಲೇಜಿನ ಪ್ರಾಂಶು ಪಾಲ ಡಾ.ಭಾಸ್ಕರ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News