ಮರಳು ಸಮಸ್ಯೆ ಬಗೆಹರಿಸುವಂತೆ ಆಗ್ರಹ: ಅ.25ರಿಂದ ಅನಿರ್ಧಿಷ್ಟಾವಧಿ ಧರಣಿ

Update: 2018-10-19 17:17 GMT

ಉಡುಪಿ, ಅ.19: ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ಸರ್ವ ಸಂಘಟನೆಗಳ ಮರಳಿ ಗಾಗಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಅ.25ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಈ ವಿಷಯ ತಿಳಿಸಿದರು. ಈ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ಐದು ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿರುವರು ಎಂದರು.

ಧರಣಿಗೆ ಪೂರ್ವ ಭಾವಿಯಾಗಿ ಅ.22ರಂದು ಬೆಳಗ್ಗೆ 10 ಗಂಟೆಗೆ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಸಭೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳಿಗೆ ಕೊನೆಯ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಇದರ ಮಧ್ಯೆ ಜಿಲ್ಲಾಡಳಿತ ಮರಳು ಸಮಸ್ಯೆ ಬಗೆಹರಿಸಿದರೆ ಧರಣಿಯನ್ನು ಕೈಬಿಡಲಾಗುವುದು ಎಂದ ಅವರು, ಜಿಲ್ಲಾಡಳಿತ ನಮ್ಮ ಹೋರಾಟಕ್ಕೆ ಸ್ಪಂದಿಸಿ ಮರಳುಗಾರಿಕೆ ಅವಕಾಶ ನೀಡದಿದ್ದರೆ ನ.6ರ ನಂತರ ಉಡುಪಿ ಜಿಲ್ಲಾ ಬಂದ್ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮರಳಿನ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳ ಆದೇಶವನ್ನು ಕೂಡ ಜಿಲ್ಲಾಡಳಿತ ಪಾಲಿಸುತ್ತಿಲ್ಲ. ಹಸಿರು ನ್ಯಾಯಪೀಠವನ್ನು ಎದುರಿಸುವ ಧೈರ್ಯ ಇಲ್ಲದ ಜಿಲ್ಲಾಧಿಕಾರಿಯನ್ನು ಕೂಡಲೇ ಉಡುಪಿ ಜಿಲ್ಲೆಯಿಂದ ವರ್ಗಾವಣೆ ಮಾಡಿ, ಧೈರ್ಯವಂತ ಜಿಲ್ಲಾಧಿಕಾರಿಯನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೇವಲ 9 ಕಡೆಗಳಲ್ಲಿ ಮರಳಿನ ದಿಬ್ಬಗಳನ್ನು ಗುರುತಿಸಿದ್ದಾರೆ. ಇದರಿಂದ 20ರಿಂದ 30 ಮಂದಿಗೆ ಮಾತ್ರ ಮರಳು ತೆಗೆಯಲು ಅವಕಾಶ ದೊರೆಯುತ್ತದೆ. ಆದರೆ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಂಪ್ರದಾಯಿಕ ವಾಗಿ ಮರಳು ತೆಗೆಯುತ್ತ ಬರುತ್ತಿರುವ ಎಲ್ಲ 171 ಮಂದಿಗೂ ಅವಕಾಶ ನೀಡಬೇಕು. ಹೆಚ್ಚುವರಿಯಾಗಿ ಇತರರಿಗೆ ನೀಡಿದರೂ ನಮ್ಮ ವಿರೋಧ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ.ನಾಗೇಂದ್ರ, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮ್ಮದ್, ಇಂಜಿನಿಯರ್ಸ್‌ ಅಸೋಸಿಯೇಶನ್ನ ಗೋಪಾಲ್ ಭಟ್ ಉಡುಪಿ, ಪ್ರದೀಪ್ ಶೆಟ್ಟಿ ಬ್ರಹ್ಮಾವರ, ಗುರುರಾಜ ರಾವ್ ಕುಂದಾಪುರ, ಬಿಲ್ಡರ್ಸ್‌ ಅಸೋಸಿಯೇಶನ್ ನ ಸುದೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಗಣಿ ಇಲಾಖಾಧಿಕಾರಿಗಳು ಶಾಮೀಲು

ಉದ್ದೇಶಪೂರ್ವಕವಾಗಿ ಮರಳಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ಅಕ್ರಮ ಮರಳುಗಾರಿಕೆಯಲ್ಲಿ ಗಣಿ ಇಲಾಖೆಯ ಅಧಿಕಾರಿ ಗಳು ಶಾಮೀಲಾಗಿದ್ದು, ಹಫ್ತಾ ವಸೂಲಿಯಲ್ಲಿ ನಿರತರಾಗಿದ್ದಾರೆ. ಅದೇ ಕಾರಣಕ್ಕೆ ಕಾನೂನು ಬದ್ಧ ಮರಳುಗಾರಿಕೆಗೆ ಅಧಿಕಾರಿಗಳು ಆಸಕ್ತಿ ತೋರಿ ಸುತ್ತಿಲ್ಲ. ಅಲ್ಲದೇ ಇದರ ಹಿಂದೆ ಕೃತಕ ಮರಳು(ಎಂ ಸ್ಯಾಂಡ್) ತಯಾರಕ ಮತ್ತು ಮಲೇಶಿಯಾದಿಂದ ಮರಳು ಆಮದು ಮಾಡುವವರ ಲಾಬಿ ಕೂಡ ಕೆಲಸ ಮಾಡುತ್ತಿದೆ ಎಂದು ಶಾಸಕ ಕೆ.ರಘುತಿ ಭಟ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News