ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ನಿಧನ

Update: 2018-10-20 07:49 GMT

ಕಾಸರಗೋಡು, ಅ. 20: ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಇಂದು ಮಂಜಾನೆ 5:30ರ ಸುಮಾರಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಜ್ವರದಿಂದ ಬಳಲುತ್ತಿದ್ದ ಅವರು 2 ದಿನಗಳ ಹಿಂದೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ಅವರ ನಿಧನಕ್ಕೆ ಕಾರಣವೆನ್ನಲಾಗಿದೆ. 

ಅವರ ಪಾರ್ಥಿವ ಶರೀರವನ್ನು ಚೆಂಗಳ ನಾಯಮ್ಮರ ಮೂಲೆಯಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕಿಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನ ಪಡೆಯುತ್ತಿದ್ದರು. ಸಂಜೆ 6 ಗಂಟೆಗೆ ಆಲಂಪಾಡಿ ಜುಮಾ ಮಸೀದಿ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೇರಳ ಪ್ರತಿ ಪಕ್ಷ ನಾಯಕ  ರಮೇಶ್  ಚೆನ್ನಿತ್ತಲ, ಮಾಜಿ ಮುಖ್ಯಮಂತ್ರಿ  ಉಮ್ಮನ್  ಚಾಂಡಿ  ಸೇರಿದಂತೆ  ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು. 

ಪಿ.ಬಿ.ಅಬ್ದುಲ್ ರಝಾಕ್ ರ ನಿಧನದ ಹಿನ್ನೆಲೆಯಲ್ಲಿ  ಮಂಜೇಶ್ವರ ವಿಧಾನಸಭಾ  ಕ್ಷೇತ್ರದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಇಂದು ರಜೆ ಸಾರಲಾಗಿದೆ.

ಎರಡು ಬಾರಿ ಮಂಜೇಶ್ವರ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಅಬ್ದುರ್ರಝಾಕ್ ಚೆಂಗಳಂ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2011ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂನ ಸಿ.ಎಚ್.ಕುಞಾಂಬುರನ್ನು 5,825 ಮತಗಳಿಗೆ ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೇರಳ ವಿಧಾನ ಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡದ ಕಂಪನ್ನು ಸಾರಿದ್ದರು. 2016ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 89 ಮತಗಳಿಗೆ ಬಿಜೆಪಿಯ ಕೆ. ಸುರೇಂದ್ರನ್‌ರನ್ನು ಸೋಲಿಸಿ ಎರಡನೆ ಬಾರಿ ವಿಧಾನಸಭೆಗೆ ಆಯ್ಕೆಯಾದರು.

ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಸ್ಟಾಡಿಂಗ್ ಕಮಿಟಿ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ, ಕಾಸರಗೋಡು ಸಂಯುಕ್ತ ಜಮಾಅತ್ ಕಾರ್ಯಾಧ್ಯಕ್ಷ, ನೆಲ್ಲಿಕ್ಕಟ್ಟ, ನೀರ್ಚಾಲ್ ಜಮಾಅತ್ ಅಧ್ಯಕ್ಷ, ಆಲಂಪ್ಪಾಡಿ ನೂರುಲ್ ಇಸ್ಲಾಮಿಕ್ ಯತೀಂಖಾನ ಉಪಾಧ್ಯಕ್ಷರಾಗಿಯೂ ಪಿಬಿ ಅಬ್ದುಲ್‌ರಝಾಕ್ ಸೇವೆ ಸಲ್ಲಿಸಿದ್ದಾರೆ.

 ಮೃತರು ಪತ್ನಿ, ನಾಲ್ಕು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News