"ಹಿಜಾಬ್ ಧರಿಸುವುದನ್ನು ನಿಲ್ಲಿಸಿ ಇಲ್ಲವೇ ರಾಜೀನಾಮೆ ನೀಡಿ"

Update: 2018-10-20 10:57 GMT

ಕರಾಚಿ,ಅ.20 :  ಉದ್ಯೋಗ ಸ್ಥಳದಲ್ಲಿ ಹಿಜಾಬ್ ಧರಿಸುವುದನ್ನು ನಿಲ್ಲಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ಪಾಕಿಸ್ತಾನದ ಸಾಫ್ಟ್‍ವೇರ್ ಕಂಪೆನಿಯೊಂದರ ಮ್ಯಾನೇಜರ್ ಅಲ್ಲಿನ ಮಹಿಳಾ ಉದ್ಯೋಗಿಗೆ ಹೇಳಿದ್ದು  ಸಾಮಾಜಿಕ ಜಾಲತಾಣದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿ ಅಂತಿಮವಾಗಿ ಕ್ರಿಯೇಟಿವ್ ಖೊವಸ್ ಎಂಬ ಆ ಸಾಫ್ಟ್ ವೇರ್ ಕಂಪೆನಿಯ ಸಿಇಒ ಜವ್ವದ್ ಕಾದಿರ್ ರಾಜೀನಾಮೆ ನೀಡಬೇಕಾಯಿತು.

ಹಿಜಾಬ್ ಧರಿಸುವುದರಿಂದ ಕಂಪೆನಿಯ ಇಮೇಜ್ ಗೆ ಧಕ್ಕೆಯಾಗುತ್ತದೆ ಎಂದು ಮಹಿಳಾ ಉದ್ಯೋಗಿಗೆ ಆಕೆಯ ಲೈನ್ ಮ್ಯಾನೇಜರ್ ಹೇಳಿದ್ದರೆನ್ನಲಾಗಿದೆ. ಆಕೆ ಈ ಕಂಪೆನಿ ತೊರೆದಲ್ಲಿ  ಆಕೆಗೆ ಎರಡು ಇಸ್ಲಾಮಿಕ್ ಬ್ಯಾಂಕುಗಳಲ್ಲಿ ಪರ್ಯಾಯ ಉದ್ಯೋಗ ಕೂಡ ಆಫರ್ ಮಾಡಲಾಗಿತ್ತು ಎಂದು ಆಕೆ ತಿಳಿಸಿದ್ದಳು.

ಸಿಇಒ ಕಾದಿರ್ ಆರಂಭದಲ್ಲಿ ಕ್ಷಮೆ ಕೋರಿ ಪ್ರಕರಣವನ್ನು ಅಲ್ಲಿಗೇ ಮುಗಿಸಲು ಯತ್ನಿಸಿ ಇಡೀ ಪ್ರಕರಣದ ಜವಾಬ್ದಾರಿಯನ್ನು ಹೊತ್ತುಕೊಂಡರೂ ಪ್ರಯೋಜನವಾಗಿಲ್ಲ. ಸಂತ್ರಸ್ತೆಗೆ ಆಕೆ ನೀಡಿದ ರಾಜೀನಾಮೆ ವಾಪಸ್ ಪಡೆಯಲು ಹೇಳಲಾಗಿದೆ ಎಂದೂ ಅವರು ತಿಳಿಸಿದ್ದರು. ಕಾದಿರ್ ಗೆ ತನ್ನ ಸಿಇಒ ಹುದ್ದೆಯನ್ನು ತೊರೆಯುವಂತೆ ಹೇಳಲಾಗಿದೆ ಎಂದು ಕಂಪೆನಿ  ತನ್ನ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ನಂತರ ಹೇಳಿದೆ.

"ನನ್ನ ಕ್ಷಮಾಪಣೆ ಸಾಕಾಗದು" ಎಂದು ನಂತರ ಕಂಪೆನಿಯ ಎಲ್ಲಾ ಸದಸ್ಯರಿಗೆ ಇಮೇಲ್ ಮಾಡಿದ ಕಾದಿರ್ ತಾನು ಸಿಇಒ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News