ಮಾಲೆಗಾಂವ್ ಸ್ಫೋಟ ಪ್ರಕರಣ: ಯುಎಪಿಎ ಕಾಯ್ದೆಯಡಿ ಪ್ರಜ್ಞಾಸಿಂಗ್, ಪುರೋಹಿತ್ ವಿಚಾರಣೆ

Update: 2018-10-20 14:06 GMT

ಮುಂಬೈ, ಅ.20: ತಮ್ಮ ವಿರುದ್ಧದ ಪ್ರಕರಣಕ್ಕೆ ಭಯೋತ್ಪಾದನೆ ವಿರೋಧಿ ಕಾನೂನನ್ನು ಅನ್ವಯಗೊಳಿಸಬಾರದು ಎಂಬ ಲೆಕ ಪ್ರಸಾದ್ ಪುರೋಹಿತ್ ಹಾಗೂ ಪ್ರಜ್ಞಾಸಿಂಗ್ ಸೇರಿದಂತೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳ ಮನವಿಯನ್ನು ತಳ್ಳಿ ಹಾಕಿರುವ ವಿಶೇಷ ನ್ಯಾಯಾಲಯವು, ವಿಚಾರಣೆಯನ್ನು ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆಯಡಿ ನಡೆಸಲಾಗುವುದು ಎಂದು ತಿಳಿಸಿದೆ. 

ತಮ್ಮ ವಿರುದ್ಧ ದಾಖಲಿಸಲಾಗಿರುವ ಪ್ರಕರಣ ಭಯೋತ್ಪಾದನೆ ವಿರೋಧಿ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ ಎಂದು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಕಳೆದ ತಿಂಗಳು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಆರೋಪ ಪಟ್ಟಿ ದಾಖಲಿಸುವ ಮುನ್ನ ಆರೋಪಿಗಳಿಗೆ ಸೂಕ್ತ ಅವಕಾಶ ಒದಗಿಸಬೇಕು ಎಂದು ಬಾಂಬೆ ಹೈಕೋರ್ಟ್ ಆದೇಶಿಸಿರುವುದಾಗಿ ಆರೋಪಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರತಿವಾದಿಗಳಾದ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ವಕೀಲ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್, ಆರೋಪಿಗಳ ವಿರುದ್ಧದ ಪ್ರಕರಣ ಭಯೋತ್ಪಾದನೆ ವಿರೋಧಿ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಇದನ್ನು ನ್ಯಾಯಾಲಯ ಒಪ್ಪಿ ಆದೇಶ ಜಾರಿಗೊಳಿಸಿತು. ತಾವು ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿರುವ ಕಾರಣ ಈ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಆರೋಪಿಗಳು ಮನವಿ ಸಲ್ಲಿಸಿದರು. ಆದರೆ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ, ಮೇಲ್ಮನವಿ ಸಲ್ಲಿಸಲು ಅಕ್ಟೋಬರ್ 26ರವರೆಗೆ ಅವಕಾಶ ನೀಡಿತು. 2008ರ ಸೆ.9ರಂದು ಮಹಾರಾಷ್ಟ್ರದ ಮಾಲೆಗಾಂವ್ ನಗರದ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 6 ಮಂದಿ ಮೃತಪಟ್ಟು 101 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News