ಆರ್.ಕೆ.ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು

Update: 2018-10-20 14:08 GMT

ಹೊಸದಿಲ್ಲಿ, ಅ.20: ‘ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್(ಟಿಇಆರ್‌ಐ)’ನ ಮಾಜಿ ಅಧ್ಯಕ್ಷ ಆರ್.ಕೆ.ಪಚೌರಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ದಿಲ್ಲಿಯ ನ್ಯಾಯಾಲಯವೊಂದು ಪೀಡನೆ ಪ್ರಕರಣ ದಾಖಲಿಸಿದೆ.

ಪಚೌರಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಹೋದ್ಯೋಗಿಯಾಗಿದ್ದ ಮಹಿಳೆಯೊಬ್ಬರು 2015ರ ಫೆಬ್ರವರಿ 13ರಂದು ನೀಡಿದ್ದ ದೂರಿನಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಮಹಿಳೆ ನೀಡಿದ್ದ ದೂರಿಗೆ ಸಾಕಷ್ಟು ಪುರಾವೆಗಳಿವೆ ಎಂದು ಪೊಲೀಸರು ಮಾರ್ಚ್ 1ರಂದು ದಾಖಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದರು. ಆ ಬಳಿಕ ಮತ್ತಿಬ್ಬರು ಮಹಿಳೆಯರು ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ದಾಖಲಿಸಿದ್ದ ಹಿನ್ನೆಲೆಯಲ್ಲಿ ಪಚೌರಿ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಹಿಳೆಯರು ನೀಡುವ ಹೇಳಿಕೆಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು. ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಮಿಶ್ರ, ಪಚೌರಿ ಕುರಿತು ವರದಿ ಪ್ರಕಟಿಸುವಾಗ , ಯಾವುದೇ ಆರೋಪಗಳು ದೃಢಪಟ್ಟಿಲ್ಲ ಎಂಬ ವಿಷಯವನ್ನು ಉಪಶೀರ್ಷಿಕೆಯಾಗಿ ದಪ್ಪ ಅಕ್ಷರದಲ್ಲಿ ಪ್ರಕಟಿಸುವಂತೆ 2017ರ ಫೆಬ್ರವರಿಯಲ್ಲಿ ಸೂಚಿಸಿದ್ದರು. ಆದರೆ ಈ ವರ್ಷ ಈ ಮಧ್ಯಂತರ ಆದೇಶವನ್ನು ತಳ್ಳಿಹಾಕಿದ್ದ ಹಾಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್, ಈ ಆದೇಶ ಅನಪೇಕ್ಷಿತವಾಗಿರುವ ಕಾರಣ ಇದನ್ನು ತೆರವುಗೊಳಿಸಿರುವುದಾಗಿ ಪ್ರಕಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News