ಶಬರಿಮಲೆ ದೇವಳ ಪ್ರವೇಶಕ್ಕೆ ಮುಂದಾದ ಮಹಿಳೆಗೆ ತಡೆ: 52 ವರ್ಷ ಎಂದು ದೃಢಪಡಿಸಿದ ಬಳಿಕ ಪ್ರವೇಶಕ್ಕೆ ಅವಕಾಶ

Update: 2018-10-20 14:25 GMT

ತಿರುವನಂತಪುರ, ಅ.20: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಆವರಣದಲ್ಲಿ ಶನಿವಾರ ಕುತೂಹಲಕಾರಿ ವಿದ್ಯಮಾನವೊಂದು ನಡೆಯಿತು. ಓರ್ವ ಮಹಿಳೆ ದೇವಸ್ಥಾನ ಪ್ರವೇಶಿಸುವುದಕ್ಕೆ ಭಕ್ತರು ಅವಕಾಶ ನೀಡಲಿಲ್ಲ. ತನ್ನಲ್ಲಿದ್ದ ಗುರುತು ಪತ್ರ ತೋರಿಸಿದ ಆಕೆ ತನಗೆ 52 ವರ್ಷ ಎಂದು ದೃಢಪಡಿಸಿದ ಬಳಿಕವಷ್ಟೇ ಮಹಿಳೆಗೆ 18 ಮೆಟ್ಟಿಲು ಏರಿ ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು.

ತ್ರಿಚಿ ನಿವಾಸಿ ಲಥಾ ಎಂಬ ಮಹಿಳೆ ತನ್ನ ಕುಟುಂಬದವರೊಂದಿಗೆ ದೇವಸ್ಥಾನ ಪ್ರವೇಶಿಸಲು ಮುಂದಾದಾಗ ಭಕ್ತರು ಮಾನವ ಗೋಡೆ ರಚಿಸಿ ತಡೆಯೊಡ್ಡಿದರು. ಎಷ್ಟೇ ಬೇಡಿಕೊಂಡರೂ ಅವಕಾಶ ದೊರಕದಿದ್ದಾಗ ತನ್ನಲ್ಲಿದ್ದ ಗುರುತು ಪತ್ರ ತೋರಿಸಿ ತನ್ನ ವಯಸ್ಸು 52 ವರ್ಷ ಎಂದು ಸಾಬೀತುಪಡಿಸಿದ ಬಳಿಕ ಮಹಿಳೆಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಕಳೆದ ವರ್ಷವೂ ಶಬರಿಮಲೆ ದೇವಸ್ಥಾನಕ್ಕೆ ಬಂದಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ. 10ರಿಂದ 50 ವರ್ಷದವರೆಗಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಇದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶಾವಕಾಶ ಮಾಡಿಕೊಟ್ಟಿದೆ. ಆದರೆ ದೇವಸ್ಥಾನದ ಬಾಗಿಲು ತೆರೆದು ನಾಲ್ಕು ದಿನವಾದರೂ 10ರಿಂದ 50ರ ವಯೋಮಾನದ ಯಾವುದೇ ಮಹಿಳೆ ದೇವಸ್ಥಾನದ ಒಳಗೆ ಪ್ರವೇಶಿಸಲು ಪ್ರತಿಭಟನಾನಿರತ ಭಕ್ತರು ಅವಕಾಶ ನೀಡಿಲ್ಲ. ನೀಲಕ್ಕಲ್ ಮೂಲ ಶಿಬಿರದಲ್ಲಿ ಬುಧವಾರ ಕೆಲವು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿಸಲಟ್ಟಿರುವ ಕಾರ್ಯಕರ್ತ ರಾಹುಲ್ ಈಶ್ವರ್‌ಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಕೇರಳ ಐಜಿಪಿ ಎಸ್.ಶ್ರೀಜಿತ್ , ದೇಗುಲ ಸಂದರ್ಶಿಸಲು ಬಯಸುವ ಮಹಿಳೆಯರನ್ನು ದೇವಸ್ಥಾನದವರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತೇವೆ. ಆದರೆ ದೇವರ ದರ್ಶನಕ್ಕೆ ಅವಕಾಶ ನೀಡುವುದು ಅರ್ಚಕರಿಗೆ ಬಿಟ್ಟಿರುವ ವಿಷಯವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News