ಶಬರಿಮಲೆಯತ್ತ ಹೊರಟ ಇನ್ನಷ್ಟು ಮಹಿಳೆಯರು?

Update: 2018-10-20 14:30 GMT

ಕೊಯಂಬತ್ತೂರು, ಅ.20: ಸುಮಾರು 13 ಮಹಿಳೆಯರು 50 ಪುರುಷ ಭಕ್ತರೊಂದಿಗೆ ಶಬರಿಮಲೆ ದೇವಸ್ಥಾನದ ಒಳಗೆ ಪ್ರವೇಶಿಸಲು ಪ್ರಯಾಣ ಆರಂಭಿಸಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಶಬರಿಮಲೆಯ ಮೂಲ ಶಿಬಿರದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿರುವ ಸರಕಾರ, ಶಬರಿಮಲೆ, ಇಳವುಂಕಲ್ ಮತ್ತು ಪಂಪಾದಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಅ.22ರವರೆಗೆ ವಿಸ್ತರಿಸಿದೆ.

ಈ ಮಧ್ಯೆ, ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ 10ರಿಂದ 50 ವರ್ಷದ ಮಹಿಳೆಯರು ಪ್ರವೇಶಿಸುವುದನ್ನು ವಿರೋಧಿಸಿ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ ಎಂದು ಬಿಜೆಪಿ ಮುಖಂಡ ಕೆ.ಸುರೇಂದ್ರನ್ ತಿಳಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮುಖಂಡರ ವಾಕ್ಸಮರ ಮುಂದುವರಿದಿದ್ದು ಶಬರಿಮಲೆಯಲ್ಲಿ ನಡೆದ ಘರ್ಷಣೆ ಮತ್ತು ಹಿಂಸಾಚಾರವನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ಸಂದರ್ಭದಲ್ಲಿ ನಡೆದ ಘರ್ಷಣೆಗೆ ಹೋಲಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ವಿಶ್ವಹಿಂದು ಪರಿಷದ್(ವಿಎಚ್‌ಪಿ) ವಕ್ತಾರ ವಿನೋದ್ ಬನ್ಸಾಲ್, ಶಬರಿಮಲೆ ದೇವಸ್ಥಾನ ದಕ್ಷಿಣ ಭಾರತದ ಅಯೋಧ್ಯೆಯಾಗಿದ್ದು , ಈ ಹೋಲಿಕೆ ಮಾಡಿರುವ ಯೆಚೂರಿಗೆ ಧನ್ಯವಾದ ಸಲ್ಲಿಸುತ್ತೇನೆ. ಶಬರಿಮಲೆ ದೇವಳದ ಪಾವಿತ್ರತೆ, ಧಾರ್ಮಿಕ ನಂಬಿಕೆ ಹಾಗೂ ಪ್ರಶಾಂತತೆಯ ಮೇಲೆ ಆಕ್ರಮಣ ನಡೆಸಿದ ರೀತಿಯಿಂದಲೇ ಸಿಪಿಐ(ಎಂ)ನ ನೈಜರೂಪದ ಪರಿಚಯವಾಗಿದೆ ಎಂದು ಟೀಕಿಸಿದ್ದಾರೆ. ಹಿಂದೂ ಧರ್ಮೀಯರಲ್ಲದವರನ್ನು ಟ್ರಾವಂಕೋರ್ ದೇವಸ್ವಂ ಮಂಡಳಿಗೆ ನೇಮಿಸುವಾಗ, ಕೇರಳದ ಕ್ರೈಸ್ತ ಸನ್ಯಾಸಿನಿಯ ಪ್ರಕರಣದಲ್ಲಿ ಸಿಪಿಐ ಎಂ ಮೌನ ತಳೆದಿದೆ. ಆದರೂ ದೇವಳದ ಪಾವಿತ್ರತೆಯನ್ನು ರಕ್ಷಿಸಲು ಪಣತೊಟ್ಟಿರುವ ಹಾಗೂ ಪ್ರತಿಭಟನೆ ನಡೆಸುತ್ತಿರುವ ಜನತೆಯನ್ನು ಅಭಿನಂದಿಸುವುದಾಗಿ ಬನ್ಸಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News