ಫೋಟೋ ಕ್ಲಿಕ್ಕಿಸಿದ ಕೂಡಲೇ ಆ ತಾಯಿ ನನ್ನನ್ನು...!

Update: 2018-10-20 16:15 GMT

ಮೈಸೂರು.ಅ.20: "ದಸರಾ ಪ್ರಾರಂಭವಾದ ಮೂರ್ನಾಲ್ಕು ದಿನಗಳಿರಬೇಕು. ಅರಮನೆಯ ಒಳಗೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಫೋಟೊ ತೆಗೆಯಬೇಕಿತ್ತು. ಆ ಸಂದರ್ಭದಲ್ಲಿ ಗಜಪಡೆಗಳು ಏನು ಮಾಡುತ್ತಿವೆ ಎಂಬುದರ ಫೋಟೋಗಳ ಅಗತ್ಯವಿದ್ದುದರಿಂದ ಗಜಪಡೆಗಳ ಬಳಿ ಹೋಗುತ್ತಿದ್ದಾಗ ಈ ದೃಶ್ಯವನ್ನು ಸೆರೆಹಿಡಿಯಲಾಯಿತು' ಎಂದು ದಸರಾ ವೈರಲ್ ಫೋಟೋ ಕ್ಲಿಕ್ಕಿಸಿದ ಹಿರಿಯ ಛಾಯಾಗ್ರಾಹಕ ನೇತ್ರ ರಾಜು 'ವಾರ್ತಾಭಾರತಿ' ಯೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಹಸಿವು, ದಾಹ, ನೋವು, ಸಂಕಟ ಮತ್ತು ನಿರ್ಲಕ್ಷತನದ ಏಟು ತಿಂದ ತಾಯಿ ಹೃದಯ ಅರಮನೆಯ ಬೆಳಕಿನ ಸೌಂದರ್ಯ ಕಂಡು ನಿಬ್ಬೆರಗಾಗಿ ಮಗನ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮೂಕ ವಿಸ್ಮಿತಳಾಗಿ ನಿಂತಿರುವ ಈ ಅದ್ಭುತ ದೃಶ್ಯ ಈಗ ಎಲ್ಲರ ಮನಕಲಕುವಂತಿದೆ. 

'ಅರಮನೆ ಒಳಗಡೆ ಒಂದು ಸುತ್ತು ಹಾಕುತ್ತಿದ್ದೆ. ಆಗ ಈ ಅಸಹಾಯಕ ಮಹಿಳೆ ತನ್ನ ಮಗುವನ್ನು ಸೊಂಟದ ಮೇಲೆ ಕೂರಿಸಿಕೊಂಡು ಅರಮನೆ ಬೆಳಕನ್ನು ಕಂಡು ಹೋಗುತ್ತಿದ್ದುದು ಕಣ್ಣಿಗೆ ಬಿತ್ತು. ಇಂತಹ ಒಂದು ಫೋಟೋ ಅಗತ್ಯವಿದೆ ಅನಿಸಿತು. ಹಾಗೆ ಒಮ್ಮೆ ಪೋಟೋ ಕ್ಲಿಕ್ಕಿಸಿದೆ. ತಕ್ಷಣಕ್ಕೆ ಆ ತಾಯಿ ನನ್ನನ್ನು ನೋಡಿಬಿಟ್ಟರು. ನಾನು ಗೊತ್ತಿಲ್ಲದ ರೀತಿ ಎಷ್ಟೇ ಪ್ರಯತ್ನಪಟ್ಟರೂ ಅವರು ನಾನು ಪೋಟೋ ತೆಗೆಯುವುದನ್ನೇ ಹಿಂದಕ್ಕೆ ತಿರುಗಿ ತಿರುಗಿ ನೋಡುತ್ತಿದ್ದರು.
ನಾನು ಕೆಲಸ ಮಾಡುವ ಸಂಸ್ಥೆಗೆ ಬೇಕಾದ ರೀತಿ ಫೋಟೋ ತೆಗೆಯುತ್ತಿದ್ದೆ. ಆ ಅಸಹಾಯಕ ಮಹಿಳೆ ನೋಡಿದಾಕ್ಷಣ ನನಗೆ ಬೇಕಾದಂತೆ ಫೋಟೊ ತೆಗೆಯಬೇಕು ಎಂದೆನಿಸಿತು. ಛಾಯಾಗ್ರಾಹಕನಾದವನಿಗೆ ಒಂದು ಇಮೇಜು ಎಂಬುದಿರುತ್ತದೆ. ಆದಕ್ಕಾಗಿ ನಾನು ಸುಮಾರು ಅರ್ಧ ತಾಸು ಕಾಯುತ್ತಾ ನಿಂತೆ. ಆದರೂ ಮಹಿಳೆ ನನ್ನನ್ನೇ ಗಮನಿಸುತ್ತಿದ್ದಳು. ತನ್ನ ಮಗುವನ್ನು ಆಕೆ ಕೆಳಗೆ ಇಳಿಸಿದಾಗೆಲ್ಲಾ ಆ ಮಗು ಅತ್ತಿಂದಿತ್ತ ಓಡಾಡುತ್ತಿತ್ತು ಎಂದು ವೈರಲ್ ಫೋಟೋ ಸೆರೆಹಿಡಿಯುವ ಅನುಭವವನ್ನು ನೇತ್ರರಾಜು ಬಿಚ್ಚಿಟ್ಟರು.

 ಛಾಯಾಗ್ರಾಹಕ ನೇತ್ರರಾಜು

'ನಾನು ಏನೂ ಗೊತ್ತಿಲ್ಲದವನಂತೆ ಸುತ್ತಮುತ್ತ ನೋಡುತ್ತಿದ್ದೆ. ಆದರೂ ನನಗೆ ಫೋಟೋ ತೆಗೆಯಲು ಆಗುತ್ತಿರಲಿಲ್ಲ. ಅರಮನೆಗೆ ಬರುವ ಜನ ಅಡ್ಡ ಬರುತ್ತಿದ್ದರು. ಅದೇ ಸಮಯ ಆ ತಾಯಿಯು ಅರಮನೆಯ ಬೆಳಕನ್ನು ನೋಡುತ್ತಿದ್ದಾಗ ಮಗು ಪಕ್ಕದಲ್ಲಿ ಬಂದು ನಿಂತಿತು. ತಕ್ಷಣ ಕ್ಲಿಕ್ ಮಾಡಿದೆ. ಇದು ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ' ಎಂದು ಫೋಟೋ ಕ್ಲಿಕ್ಕಿಸಿದಾಗ ಉಂಟಾದ ಅನುಭವವನ್ನು ನೇತ್ರರಾಜು ತೆರೆದಿಡುತ್ತಾರೆ. 

ಅರಮನೆಯ ಬೆಳಕಲ್ಲಿ ಕಟು ನೋವಿನ ಸಾಕ್ಷಾತ್ಕಾರವಾಗಿದೆ. ವಿದ್ಯುತ್ ದೀಪಲಂಕಾರದಿಂದ ಇರುಳ ಸೂರ್ಯನಂತೆ ಕಂಗೊಳಿಸುವ ಅರಮನೆಯನ್ನು ನಿಬ್ಬೆರಗಾಗಿ ನೋಡುತ್ತಿರುವ ಅಮ್ಮ ಮತ್ತು ಮಗುವಿನ ಚಿತ್ರ ಮಾನವೀಯ ಮನಸ್ಸುಗಳಲ್ಲಿ ಕಾರುಣ್ಯದ ಚಿಲುಮೆಗೂ ಸವಾಲು ಹಾಕುವಂತಿದ್ದರೆ, ಸಂತೋಷ, ಸಂಭ್ರಮಗಳಲ್ಲಿ ಮಿಂದೇಳುವ ಐಷಾರಾಮಿ ಜನರಲ್ಲೂ ಅಂತಃಕರಣ ಚಿಮ್ಮುವ ಅಗತ್ಯವನ್ನು ಸಾರುತ್ತಿದೆ.

ಅರಮನೆಯ ಬೆಳಕಿನ ಮುಂದೆ ಹಸಿವು, ಬಡತನ, ಅಸಹಾಯಕತೆಯಿಂದ ಅಮ್ಮ ಮತ್ತು ಮಗ ನಿಂತು ನೋಡುತ್ತಿರುವ ದೃಶ್ಯವೇ ರಾರಾಜಿಸುತ್ತಿದೆ. ಒಂದು ಕಡೆ ದಸರಾ ವೈಭೋಗವಾದರೆ ಮತ್ತೊಂದೆಡೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಯಾವ ಸರ್ಕಾರದ ಯೋಜನೆಗಳೂ ತಲುಪದೇ ನಿರ್ಲಕ್ಷತನದಿಂದ ಬದುಕು ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ಕತ್ತಲೆಯಲ್ಲೇ ಇನ್ನೂ ಬದುಕು ನಡೆಸುತ್ತಿರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News