ಪುತ್ತೂರಿನ ಮನೆಯನ್ನು ಮಾರಿದ ಸಚಿವ ಡಿ.ವಿ. ಸದಾನಂದ ಗೌಡ ?

Update: 2018-10-21 07:11 GMT

ಪುತ್ತೂರು, ಅ. 21: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ, ಬಳಿಕ ಸಂಸದರಾಗಿ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪುತ್ತೂರು ನಗರದ ಹೊರವಲಯದ ಪಡೀಲಿನಲ್ಲಿದ್ದ  ತನ್ನ ಮನೆಯನ್ನು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಪುತ್ತೂರಿನ ಶಾಸಕರಾಗಿ, ಮಂಗಳೂರು ಮತ್ತು ಉಡಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ಮುಖ್ಯಂತ್ರಿಯಾಗಿ, ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ ಕೀರ್ತಿ ಇವರದ್ದಾಗಿದ್ದರೂ, ಎಲ್ಲಾ ಅವಧಿಯಲ್ಲಿಯೂ ಪುತ್ತೂರಿನ ಮತದಾರರಾಗಿಯೇ ಇದ್ದ ಡಿ.ವಿ. ಇದೀಗ ಮನೆಯನ್ನು ಮಾರಾಟ ಮಾಡಿರುವುದು ಸಾರ್ವಜನಿಕರಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ತನಗೆ ರಾಜಕೀಯ ಸ್ಥಾನ ಮಾನ ನೀಡಿದ ಪುತ್ತೂರು ಕ್ಷೇತ್ರವನ್ನು ಹಾಗೂ ಇಲ್ಲಿನ ಜನತೆಯನ್ನು ಡಿ.ವಿ.ಸದಾನಂದ ಗೌಡ ಅವರು ಮರೆತರೇ ಎಂಬ ಮಾತು ಒಂದೆಡೆ ಕೇಳಿದರೆ, ಇನ್ನೊಂದೆಡೆ ಡಿ.ವಿ.ಸದಾನಂದ ಗೌಡರು ಪುತ್ತೂರನ್ನು ಮರೆತರು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಪುತ್ತೂರು ನಗರಸಭೆಯ ಪಡೀಲು ವಾರ್ಡ್‍ನಲ್ಲಿ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಕ್ಕದಲ್ಲಿ ಹಾರಾಡಿಯಲ್ಲಿ ಡಿ.ವಿ.ಸದಾನಂದ ಗೌಡ ಅವರ ಮನೆ ಇತ್ತು. ಮನೆಗೆ ತನ್ನ ತಾಯಿ ಕಮಲ ಅವರ ಹೆಸರಟ್ಟಿದ್ದರು. ಅಲ್ಲದೆ ತನಗೆ ಅವಕಾಶ ನೀಡಿ ಬೆಳೆಸಿದ ಪಕ್ಷದ ಚಿಹ್ನೆಯೂ ಕಮಲವೇ ಆಗಿರುವುದರಿಂದ ತಾಯಿ ಮತ್ತು ಪಕ್ಷದ ಹೆಸರನ್ನೂ ಈ ಮನೆಯ ಹೆಸರಿನ ಮೂಲಕ ನೆನಪಿಸಿಕೊಂಡಿದ್ದರು. ಪುತ್ತೂರಿನಲ್ಲಿ ಅವರು ಎರಡನೇ ಅವಧಿಯ ಶಾಸಕರಾಗಿದ್ದ ವೇಳೆ ಜಾಗ ಖರೀದಿಸಿ ಈ ನೂತನ ಮನೆಯನ್ನು ನಿರ್ಮಿಸಿದ್ದರು. ಈ ಮನೆಯುಳ್ಳ 13 ಸೆಂಟ್ಸ್ ನಿವೇಶನವನ್ನು ಅವರು ಇದೀಗ ಉಪ್ಪಿನಂಗಡಿ ಕಡೆಯ ಮುಸ್ಲಿಂ ವ್ಯಕ್ತಿಯೊಬ್ಬರಿಗೆ 1.25 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿರುವ ತನ್ನ ಮನೆ ಸಮೀಪವೇ ಹೊಸಮನೆಯೊಂದನ್ನು ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. 

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಸುಳ್ಯದಲ್ಲಿ ವಕೀಲ ವೃತ್ತಿಯಲ್ಲಿದ್ದರು. ಆ ಸಂದರ್ಭದಲ್ಲಿ ಅವರನ್ನು ಬಿಜೆಪಿ ನಾಯಕರು ಪುತ್ತೂರಿಗೆ ಬರಮಾಡಿಸಿಕೊಂಡು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಮೊದಲ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಅವರನ್ನು ಎರಡನೇ ಬಾರಿಗೆ ಅವಕಾಶ ನೀಡಿ, ಗೆಲ್ಲಿಸಿಕೊಂಡುವ ಮೂಲಕ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರು. ಎರಡು ಬಾರಿ ಪುತ್ತೂರು ಕ್ಷೇತ್ರದ ಶಾಸಕರಾಗಿ, ಮಂಗಳೂರು ಕ್ಷೇತ್ರದ ಸಂಸದರಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದ ಡಿವಿ ಸದಾನಂದ ಗೌಡ ಅವರು ಆ ಬಳಿಕ ಮುಖ್ಯಮಂತ್ರಿಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಅವರು ಇದೀಗ ಕೇಂದ್ರ ಸಚಿವರಾಗಿದ್ದಾರೆ. 

ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಮೆಟ್ಟಲೇರಿದ ಡಿ.ವಿ ಅವರು ರಾಜಕೀಯದಲ್ಲಿ ಮುಂದೆ ಬಂದಿದ್ದ ಡಿವಿ.ಸದಾನಂದ ಗೌಡ ಅವರು ಇತ್ತೀಚಿನ ಕೆಲವು ವರ್ಷಗಳಿಂದ ಪುತ್ತೂರಿನ ಜನತೆಯಿಂದ ದೂರವಾಗಿದ್ದರು ಎಂಬ ಮಾತುಗಳು ಕೇಳಿ ಬರಲಾರಂಭಿಸಿತ್ತು.  ಪ್ರತೀ ಚುನಾವಣೆಯ ಸಂದರ್ಭದಲ್ಲೂ ಪತ್ನಿ ಡಾಟಿ ಸದಾನಂದ ಹಾಗೂ ಪುತ್ರ ಕಾರ್ತಿಕ್ ಜತೆ ಪಡೀಲಿನಲ್ಲಿರುವ ಹಾರಾಡಿ ಶಾಲಾ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸುತ್ತಿದ್ದ ಸದಾನಂದ ಗೌಡ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭಾ ಚುನಾವಣೆಯಲ್ಲಿ ಒಬ್ಬಂಟಿಯಾಗಿ ಬಂದು ಮತ ಚಲಾಯಿಸಿ ಹೋಗಿದ್ದರು. ಇದೀಗ ಅವರು ಪುತ್ತೂರಿನ ಪಡೀಲಿನಲ್ಲಿರುವ ತನ್ನ ಮನೆಯನ್ನೂ ಮಾರಾಟ ಮಾಡಿರುವುದರಿಂದ ಪುತ್ತೂರಿನ ಜನತೆಯಿಂದ ಬಹುದೂರವಾಗುವ ಲಕ್ಷಣ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News