ದೇವಳ ಪ್ರವೇಶಿಸುವ ಮೂವರು ಮಹಿಳೆಯರ ಪ್ರಯತ್ನ ವಿಫಲ

Update: 2018-10-21 13:32 GMT

ತಿರುವನಂತಪುರ, ಅ.21: ರವಿವಾರ 50 ವರ್ಷದ ಕೆಳಹರೆಯದ ಮೂವರು ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಲು ನಡೆಸಿದ ಪ್ರಯತ್ನವನ್ನು ಪ್ರತಿಭಟನಾಕಾರರು ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಆಂಧ್ರಪ್ರದೇಶದ ಮಹಿಳೆಯರಾದ ವಸಂತಿ(41 ವರ್ಷ) ಹಾಗೂ ಆದಿಶೇಷಿ(42 ವರ್ಷ) ಜೊತೆಯಾಗಿ ಪಂಪಾ ಮೂಲಶಿಬಿರದಿಂದ ಸುಮಾರು 200 ಮೀಟರ್‌ನಷ್ಟು ದೂರ ಕಾಲ್ನಡಿಗೆಯಲ್ಲಿ ಸಾಗಿ ಬಂದಿದ್ದರು. ಆದರೆ ಅಲ್ಲಿ ಅವರನ್ನು ತಡೆದ ಪ್ರತಿಭಟನಾಕಾರರು ಮುಂದುವರಿಯಲು ಅವಕಾಶ ನೀಡಲಿಲ್ಲ. ಬಾಲಮ್ಮ (47 ವರ್ಷ) ಎಂಬ ಮಹಿಳೆ ಏಕಾಂಗಿಯಾಗಿ ಸುಮಾರು 4 ಕಿ.ಮೀ.ನಷ್ಟು ದೂರ ಸಾಗಿ ಬಂದಿದ್ದರು. ಆದರೆ ಈ ಸಂದರ್ಭ ಅವರನ್ನು ಮುತ್ತಿಕೊಂಡ ಪ್ರತಿಭಟನಾಕಾರರು ವಾಪಾಸು ತೆರಳುವಂತೆ ಆಗ್ರಹಿಸಿದರು. ಈ ವೇಳೆ ಭಯ ಮತ್ತು ಆತಂಕದಿಂದ ಅಸ್ವಸ್ಥಗೊಂಡ ಬಾಲಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ಬೆಳಿಗ್ಗೆ ಆಂಧ್ರದ ಇಬ್ಬರು ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಉದ್ದೇಶದಿಂದ ಪಂಪಾ ಮೂಲಶಿಬಿರಕ್ಕೆ ಆಗಮಿಸಿದ್ದರು. ಆದರೆ ಶಬರಿಮಲೆಯಲ್ಲಿರುವ ಪರಿಸ್ಥಿತಿಯನ್ನು ಅರಿತುಕೊಂಡ ಅವರು ಅಲ್ಲಿಂದಲೇ ವಾಪಸಾಗಲು ನಿರ್ಧರಿಸಿದಾಗ ಅವರ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಅವರನ್ನು ಸುರಕ್ಷಿತವಾಗಿ ಮರಳಿ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಶನಿವಾರ ಭಾರೀ ಮಳೆಯ ಕಾರಣ ಕೇರಳದ 38ರ ಹರೆಯದ ಮಹಿಳೆ ದೇವಸ್ಥಾನ ಪ್ರವೇಶಿಸುವ ತನ್ನ ಯೋಜನೆಗೆ ತಿಲಾಂಜಲಿ ಇತ್ತು ವಾಪಸಾಗಿದ್ದರು.

ಕಳೆದ ಬುಧವಾರ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆದ ಬಳಿಕ ಇದುವರೆಗೆ 50ರ ಕೆಳಹರೆಯದ ಕೇವಲ 9 ಮಹಿಳೆಯರು ದೇವಸ್ಥಾನ ಪ್ರವೇಶಕ್ಕೆ ಪ್ರಯತ್ನಿಸಿದ್ದಾರೆ . ಆದರೆ ಯಾರು ಕೂಡಾ ಯಶಸ್ವಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು.

ದಲಿತ ಮುಖಂಡೆಗೆ ಪೊಲೀಸ್ ಭದ್ರತೆ ನಿರಾಕರಣೆ

ಈ ಮಧ್ಯೆ, ಶನಿವಾರ ಶಬರಿಮಲೆ ಬೆಟ್ಟದ 18 ಮೆಟ್ಟಿಲು ಏರಿ ದೇವಸ್ಥಾನವನ್ನು ಪ್ರವೇಶಿಸಲು ಮುಂದಾದ ಕೇರಳ ದಲಿತ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಜುಗೆ ಭದ್ರತೆ ಒದಗಿಸಲು ಪೊಲೀಸರು ನಿರಾಕರಿಸಿದ ಘಟನೆ ನಡೆಯಿತು.

   ಮಂಜು ಪೊಲೀಸ್ ರಕ್ಷಣೆ ಕೇಳಿದಾಗ , ನಿಮ್ಮ ಹಿನ್ನೆಲೆಯ ವಿವರ ಪಡೆದು ಬಳಿಕ ನಿರ್ಧರಿಸುವುದಾಗಿ ಪೊಲೀಸರು ತಿಳಿಸಿದರು. ಮೂಲಭೂತವಾದಿ ಸಂಘಟನೆಯೊಂದರ ಜೊತೆ ಆಕೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಹಾಗೂ ಆಕೆಯ ವಿರುದ್ಧ ಕೆಲವು ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಒದಗಿಸಲು ನಿರಾಕರಿಸಿದರು ಎಂದು ವರದಿಯಾಗಿದೆ.­

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News